ವಿಜಯಪುರ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿನ್ನೆ ಮೂವರು ಅಪ್ರಾಪ್ತರ ಮೇಲೆ ನಾಯಿಯೊಂದು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಗರದ ಬಡಿ ಕಮಾನ್ ಬಳಿ ನಡೆದಿದೆ. ಮನೆಯಿಂದ ಹೊರ ಬಂದಿದ್ದ ಮೂವರು ಮಕ್ಕಳ ಮೇಲೆ ಬೀದಿ ನಾಯಿಯೊಂದು ಏಕಾಏಕಿ ದಾಳಿ ನಡೆಸಿದೆ. ದಾಳಿ ನಡೆಸಿದ ನಾಯಿಯನ್ನು ಸೆರೆ ಹಿಡಿಯಲಾಗಿದೆ.
ಗಾಯಾಳು ಮಕ್ಕಳನ್ನು ಕೂಡಲೇ ವಿಜಯಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ನಾಯಿ ದಾಳಿ ವೇಳೆ ಬಿಡಿಸಲು ಬಂದಿದ್ದ ವೃದ್ಧೆಗೂ ಗಾಯಗೊಳಿಸಿದೆ ಎನ್ನಲಾಗಿದೆ. ದಾಳಿಗೆ ಒಳಗಾದ ಮಕ್ಕಳು ನಗರದ ಬಡೀ ಕಮಾನ್, ಬಾಗಾಯತ್ಗಲ್ಲಿ ಹಾಗೂ ದೌಲತ್ ಕೋಟೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. ಬೀದಿನಾಯಿಗಳ ಹಾವಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಬಳಿಕ ಬೀದಿ ನಾಯಿಗಳ ಕಾಟಕ್ಕೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬೀದಿ ನಾಯಿಗಳ ಹತೋಟಿಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದ ಆರೋಪಿಸಿದ್ದಾರೆ. ಕೂಡಲೇ ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರ ಮಾಡಬೇಕು. ಕೇವಲ ಇಂತಹ ಘಟನೆಗಳಾದಾಗ ಕೆಲ ಬೀದಿನಾಯಿಗಳನ್ನ ಹಿಡಿಯುವ ಪ್ರಹಸನ ನಡೆಯಬಾರದು. ಈ ಸಮಸ್ಯೆಗೆ ಕಟ್ಟುನಿಟ್ಟಿನ ಕ್ರಮ ಮತ್ತು ಸಂಪೂರ್ಣ ಕಾರ್ಯಾಚರಣೆ ನಡೆಸಿ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲ್ಲವಾದರೆ ಹೋರಾಟ ಮಾಡೋದಾಗಿ ಎಚ್ಚರಿಕೆಯನ್ನೂ ಸಹ ಸ್ಥಳೀಯರು ನೀಡಿದ್ದಾರೆ.
ಹಿಂದಿನ ಘಟನೆಗಳು, ಬಾಲಕನ ಮೇಲೆ ನಾಯಿ ದಾಳಿ: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ ಕಚ್ಚಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು. ಪ್ರಜ್ವಲ್ ಎಂಬ ಬಾಲಕನ ಮೇಲೆ ಸಂಜೆ ವೇಳೆ ನಾಯಿ ದಾಳಿ ಮಾಡಿತ್ತು. ಪ್ರಜ್ವಲ್ ಮನೆಯ ಮುಂದೆ ಆಟ ಆಡುತ್ತಿರುವಾಗ ಏಕಾಏಕಿ ನಾಯಿ ದಾಳಿ ನಡೆಸಿ ಆತನ ಮುಖಕ್ಕೆ ಕಚ್ಚಿತ್ತು. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು.
ಮಗು ಮೇಲೆ ನಾಯಿ ದಾಳಿ: ಮನೆ ಎದುರು ಆಟವಾಡುತ್ತಿದ್ದ ಮಗು ಮೇಲೆ ಬೀದಿನಾಯಿ ದಾಳಿ ನಡೆಸಿದ್ದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿತ್ತು. ಮನೆ ಹೊರಗೆ ಆಟವಾಡುತ್ತಿದ್ದ ಮಗುವಿನ ಮೇಲೆ ಏಕಾಏಕಿ ಬೀದಿ ನಾಯಿ ದಾಳಿ ನಡೆಸಿತ್ತು. ಘಟನೆಯಲ್ಲಿ ಸುಪೀಯಾ ಎಂಬ ಮಗು ಗಂಭೀರವಾಗಿ ಗಾಯಗೊಂಡಿತ್ತು. ಬಳಿಕ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಇದನ್ನೂ ಓದಿ: ಧಾರವಾಡದಲ್ಲಿ ಶಾಲಾ ಮಕ್ಕಳು ಸೇರಿ ಐವರಿಗೆ ಕಚ್ಚಿ ಗಾಯಗೊಳಿಸಿದ ನಾಯಿ