ವಿಜಯಪುರ: ಬಿಎಲ್ಡಿಇ ವೈದ್ಯಕೀಯ ಕಾಲೇಜ್ ಮೈದಾನದಲ್ಲಿ ನಡೆದ ಪದವಿ ಪೂರ್ವ ಮಹಾವಿದ್ಯಾಲಯಗಳ ರಾಜ್ಯಮಟ್ಟದ ಖೋ ಖೋ ಪಂದ್ಯಾವಳಿ ಯಲ್ಲಿ ಮಂಡ್ಯ ಜಿಲ್ಲೆಯ ಬಾಲಕಿಯರು ಮತ್ತು ಮೈಸೂರು ಜಿಲ್ಲೆಯ ಬಾಲಕರು ಚಾಂಪಿಯನ್ಗಳಾಗಿ ಹೊರಹೊಮ್ಮಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಬಿಎಲ್ಡಿಇ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ಎರಡು ದಿನಗಳ ಖೋ ಖೋ ಪಂದ್ಯಾವಳಿಯ ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಮಂಡ್ಯ ಬಾಲಕಿಯರು ಮೈಸೂರು ಬಾಲಕಿಯರನ್ನು 11–8 ಅಂಕಗಳ ಅಂತರದಿಂದ ಸೋಲಿಸಿ ಪ್ರಥಮ ಸ್ಥಾನ ಪಡೆದರು.
ಬಾಲಕರ ವಿಭಾಗದ ಪಂದ್ಯದಲ್ಲಿ ಮೈಸೂರು ತಂಡ ದಾವಣಗೆರೆ ತಂಡವನ್ನು 14-13 ಅಂಕಗಳ ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬಾಲಕಿಯರ ವಿಭಾಗದಲ್ಲಿ ನಡೆದ ಮೂರು ಸುತ್ತಿನ ಪಂದ್ಯಾವಳಿಗಳ ನಂತರ ಸೆಮಿಫೈನಲ್ ಪ್ರವೇಶಿಸಿದ, ಮೈಸೂರು ತಂಡ ಚಿಕ್ಕೋಡಿ ತಂಡವನ್ನು 17-02 ಅಂಕಗಳ ಅಂತರದಿಂದ ಸೋಲಿಸಿದರೆ, ಮಂಡ್ಯ ತಂಡ ಉಡುಪಿ ತಂಡವನ್ನು 11-05 ಅಂಕಗಳ ಅಂತರದಿಂದ ಸೋಲಿಸುವ ಮೂಲಕ ಮಂಡ್ಯ ಹಾಗೂ ಮೈಸೂರು ತಂಡಗಳು ಫೈನಲ್ ಪ್ರವೇಶಿಸಿದ್ದವು.
ಫೈನಲ್ ಪಂದ್ಯದಲ್ಲಿ ಮಂಡ್ಯ ತಂಡ ಮೈಸೂರು ತಂಡ ವನ್ನು11-13 ಅಂಕಗಳ ಅಂತರದಿಂದ ಸೋಲಿಸುವ ಮೂಲಕ ಬಾಲಕಿಯರ ವಿಭಾಗದಲ್ಲಿ ಮಂಡ್ಯ ಬಾಲಕಿಯರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರು. ಬಾಲಕರ ವಿಭಾಗದ ಮೂರು ಸುತ್ತಿನ ಫಲಿತಾಂಶದ ನಂತರ ಸೆಮಿಫೈನಲ್ ಪ್ರವೇಶಿಸಿದ ದಾವಣಗೆರೆ ತಂಡ ವಿಜಯಪುರ ತಂಡವನ್ನು 13-06 ಅಂತರದಿಂದ ಸೋಲಿಸಿದರೆ, ಇನ್ನೊಂದು ಪಂದ್ಯದಲ್ಲಿ ಮೈಸೂರು ತಂಡ ಬೆಂಗಳೂರು ಉತ್ತರ ತಂಡವನ್ನು 9-8 ಅಂತರದಿಂದ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದರು.
ಫೈನಲ್ ಪಂದ್ಯದಲ್ಲಿ ಮೈಸೂರು ತಂಡ ದಾವಣಗೆರೆ ತಂಡವನ್ನು 14-13 ಅಂಕಗಳಿಂದ ರೋಚಕವಾಗಿ ಕೇವಲ ಒಂದು ಅಂಕಗಳಿಂದ ಸೋಲಿಸುವ ಮೂಲಕ ಮೈಸೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಬಾಲಕರ ವಿಭಾಗದಲ್ಲಿ ಮೈಸೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಲು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾವಳಿಯಲ್ಲಿ ಕೇವಲ 1ಅಂಕಗಳಿಂದ ಗೆಲುವು ಸಾಧಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಟಿ20 ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ವಿರಾಟ್.. 4 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಕಿಂಗ್ ಕೊಹ್ಲಿ