ವಿಜಯಪುರ: ಇಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಹೀಗಿದ್ದರೂ ಗುಮ್ಮಟನಗರಿ ವಿಜಯಪುರದಲ್ಲಿ ರಾಜ್ಯಮಟ್ಟದ ಖೋ ಖೋ ಪಂದ್ಯಾವಳಿ ಆಯೋಜಿಸಲಾಗಿತ್ತು. ಎರಡು ದಿನಗಳ ಕಾಲ ನಡೆಯಲಿರುವ ಖೋ ಖೋ ಪಂದ್ಯಾವಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಎಂಎಲ್ಸಿ ಸುನೀಲ್ಗೌಡ ಪಾಟೀಲ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.
ರಾಜ್ಯಮಟ್ಟದ ಖೋ ಖೋ ಆಯೋಜನೆ: ನಗರದ ಬಿಎಲ್ಡಿಇ ಮೆಡಿಕಲ್ ಕಾಲೇಜ್ ಆವರಣದ ಮೈದಾನದಲ್ಲಿ ಬಿಎಲ್ಡಿಇ ಸಂಸ್ಥೆ ಹಾಗೂ ಎಸ್ಎಸ್ ಪದವಿಪೂರ್ವ ಕಾಲೇಜು ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ಖೋ ಖೋ ಪಂದ್ಯಾವಳಿ ಆಯೋಜಿಸಲಾಗಿತ್ತು.
ಏಕ ಕಾಲದಲ್ಲಿ ಆರು ಪಂದ್ಯಾವಳಿಗಳು: ಬೆಳಗ್ಗೆಯಿಂದ ಆರಂಭವಾದ ಖೋ ಖೋ ಪಂದ್ಯಾವಳಿಗಳು ನೋಡುಗರನ್ನು ರೋಮಾಂಚನಗೊಳಿಸಿತು. ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳಿಂದ 32 ಬಾಲಕ ಹಾಗೂ 32 ಬಾಲಕಿಯರ ತಂಡಗಳು ಸೇರಿ 863 ಕ್ರೀಡಾಪಟುಗಳು ಹಾಗೂ 80 ಕೋಚ್ಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಒಟ್ಟು 6 ಟ್ರ್ಯಾಕ್ಗಳನ್ನು ನಿರ್ಮಿಸಲಾಗಿತ್ತು. 90 ನಿಮಿಷಗಳ ಪಂದ್ಯಾವಳಿಯಲ್ಲಿ ಏಕ ಕಾಲದಲ್ಲಿ ಆರು ಪಂದ್ಯಾವಳಿಗಳು ನಡೆಯುತ್ತಿದ್ದವು. ಜಿಲ್ಲೆಯ ಬಹುತೇಕ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಖೋ ಖೋ ಪಂದ್ಯಾವಳಿಗಳನ್ನು ವೀಕ್ಷಿಸಿದರು.
ರೋಚಕತೆಯಿಂದ ಕೂಡಿದ್ದ ಪಂದ್ಯಾವಳಿಗಳು: ಬೆಳಗ್ಗೆಯಿಂದಲೇ ಆರಂಭವಾದ ಪಂದ್ಯಾವಳಿಗಳು ರೋಚಕತೆಯಿಂದ ಕೂಡಿತ್ತು. ಬಾಲಕ, ಬಾಲಕಿಯರ ಖೋ ಖೋ ಪಂದ್ಯಾವಳಿಗಳಲ್ಲಿ ಎದುರಾಳಿಗಳನ್ನು ಔಟ್ ಮಾಡಲು ಖೋ ಖೋ ಎನ್ನುತ್ತಾ ಟ್ರ್ಯಾಕ್ನಲ್ಲಿ ಓಡಾಡುವುದನ್ನು ನೋಡಿದರೆ ಮೈ ಜುಮ್ ಎನಿಸುತ್ತಿತ್ತು.
ತಮ್ಮ ಕಾಲೇಜು ಕ್ರೀಡಾಪಟುಗಳನ್ನು ಉಳಿದ ವಿದ್ಯಾರ್ಥಿಗಳು ಹುರಿದುಂಬಿಸುತ್ತಿದ್ದರು. ಸೋತ ಅಭ್ಯರ್ಥಿಗಳು ಮತ್ತೊಮ್ಮೆ ನಡೆಯುವ ಖೋ ಖೋ ಪಂದ್ಯಾವಳಿಯಲ್ಲಿ ಹೆಚ್ಚು ಅಭ್ಯಾಸ ಮಾಡಿ ಗೆಲ್ಲುವ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಛಲ ತೋರಿಸಿದರು.
ಓದಿ: ದಾವಣಗೆರೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ: ಮಳೆ ಮಧ್ಯೆಯೂ ಜನೋತ್ಸಾಹ