ವಿಜಯಪುರ : ಸಿಎಂ, ಪ್ರಧಾನಿ ಭೇಟಿ ಮಾಡಲು ಅಮಿತ್ ಶಾ ಅವಕಾಶ ನೀಡುತ್ತಿಲ್ಲ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ಪ್ರಧಾನಿ ಭೇಟಿ ನೀಡಲಿ ಬಿಡಲಿ, ಮನ್ ಕಿ ಬಾತ್ನಲ್ಲೂ ಪ್ರಸ್ತಾಪಿಸಿಲ್ಲ. ದಿನದಿಂದ ದಿನಕ್ಕೆ ಪ್ರವಾಹ ಸಂತ್ರಸ್ತರ ಸ್ಥಿತಿ ಬಿಗಡಾಯಿಸುತ್ತಿದೆ. ಮುಖ್ಯಮಂತ್ರಿಗಳು ಬಿಜೆಪಿಗೆ ಒಲ್ಲದ ಗಂಡನಾಗಿದ್ದಾರೆ. ಅವರಿಗೆ ಸಹಕಾರ ನೀಡುತ್ತಿಲ್ಲ. ರೂ. 2000 ಮುಖಬೆಲೆಯ ನೋಟುಗಳು ಮುಂದುವರೆಯುವುದೊ ಇಲ್ಲವೊ ರಿಸರ್ವ್ ಬ್ಯಾಂಕ್ ಗವರ್ನರ್ ಸ್ಪಷ್ಟಪಡಿಸಲಿ. ಯಾವ ಬ್ಯಾಂಕುಗಳನ್ನ ಮುಚ್ಚುತ್ತಿರಾ? ಎಂದು ಪ್ರಶ್ನಿಸಿದರು. ಮೋದಿಯವರ ಆಡಳಿತದಲ್ಲಿ ರೂ. 2.03 ಲಕ್ಷ ಕೋಟಿ ಬ್ಯಾಂಕುಗಳ ಹಣ ನಷ್ಟವಾಗಿದೆ. ಜವಳಿ, ಆಟೋ ಮೊಬೈಲ್ ಉದ್ಯಮ ಕುಸಿದಿದೆ. ಕೃಷಿ ಬೆಳವಣಿಗೆ ಶೇ.6-7 ಕಡಿಮೆಯಾಗಿದೆ. ಇದನ್ನ ಗಮನಿಸುವುದು ಬಿಟ್ಟು ನಿರ್ಮಲಾ ಸಿತಾರಾಮನ್ ಪಾಕಿಸ್ತಾನದ ಬಗ್ಗೆ ಮಾತಾಡ್ತಾರೆ. ಕೇಂದ್ರ ಸರ್ಕಾರ, ಗೃಹ, ಹಣಕಾಸು ಸಚಿವರು ದೇಶದ ಆಂತರಿಕ ಪರಿಸ್ಥಿತಿ ಬಗ್ಗೆ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಟಿಪ್ಪು ಜಯಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಂ ಸಮುದಾಯದಲ್ಲಿ ಜಯಂತಿ ಸಂಪ್ರದಾಯವಿಲ್ಲ. ನಮ್ಮಲ್ಲಿ ಮೂರ್ತಿ ಇಲ್ಲ. ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಸರ್ಕಾರ ಟಿಪ್ಪು ಜಯಂತಿ ಮಾಡುವುದು ಅಗತ್ಯವಿಲ್ಲ ಎಂದರು. ಇನ್ನು ಅನರ್ಹ ಶಾಸಕರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಸುಪ್ರೀಂಕೋರ್ಟ್ ಆದೇಶ ಏನಾಗುತ್ತೂ ಅಂತಾ ಗೊತ್ತಿಲ್ಲ. ಲೆಕ್ಕಾಚಾರಗಳು ಬಹಳಷ್ಟಿವೆ. 17 ಜನ ಅನರ್ಹ ಶಾಸಕರನ್ನು ಬಾಂಬೆಯಲ್ಲಿ ಇಟ್ಟುಕೊಂಡ ಸೇಠ್ಜೀ ಅವರನ್ನ ಕೈ ಬಿಟ್ಟಿದ್ದಾರೆ. ಈಗ ಅವರು ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಪಾರ್ಟಿ ಏನ್ ತೀರ್ಮಾನ ಮಾಡುತ್ತೆ ಅಂತಾ ಗೊತ್ತಿಲ್ಲ. ಕಾಂಗ್ರೆಸ್ಗೆ ಅವರು ಬರ್ತಾರೋ ಇಲ್ಲ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.