ವಿಜಯಪುರ : ಮಾಜಿ ಸಿಎಂ ಸಿದ್ದರಾಮಯ್ಯ ಅವರಾಗಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂಥ ಯಾವುದಾದರೂ ಹೊಸ ವಿಷಯವನ್ನ ಹುಡುಕುತ್ತಿರುತ್ತಾರೆ.
ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿಯವರದ್ದು ಪಾತ್ರ ಇದೆ ಎಂದು ಅವರ ಬಳಿ ಸಾಕ್ಷ್ಯಾಧಾರಗಳು ಇದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಬಳಿ ಸಾಕ್ಷಾಧಾರವಿದ್ದರೆ ಅದನ್ನು ತನಿಖೆ ನಡೆಸಲಾಗುವುದು ಎಂದು ಸಿಎಂ ಬೊಮ್ಮಾಯಿ ಈಗಾಗಲೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರದ್ದು ಕೇವಲ ಹಿಟ್ ಆ್ಯಂಡ್ ರನ್ ಪಾಲಿಸಿ ಅಷ್ಟೇ.. ತಟ್ಟುವುದು ನಂತರ ಓಡಿ ಹೋಗುವುದು ಅವರ ಪಾಲಿಸಿಯಾಗಿದೆ ಎಂದರು.
ಬಿಟ್ ಕಾಯಿನ್ ದಂಧೆ ಸಿದ್ದರಾಮಯ್ಯ ಅವರು ಸಿಎಂ ಕಾಲದಲ್ಲಿದ್ದಾಗಲೂ ನಡೆದಿತ್ತು. ಆಗ ಏಕೆ ತನಿಖೆ ನಡೆಸಲಿಲ್ಲ. ಈ ರೀತಿ ಸುಳ್ಳು ಆರೋಪ ಮಾಡುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ನವೆಂಬರ್ 20ಕ್ಕೆ ಬಿಎಸ್‌ವೈ ಭೇಟಿ : ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆ ನ.20ರಂದು ವಿಜಯಪುರಕ್ಕೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ಗ್ರಾಪಂ ಸದಸ್ಯರು, ಸಂಸದರು, ಶಾಸಕರು ಸೇರಿ ಚುನಾಯಿತ ಪ್ರತಿನಿಧಿಗಳ ಸಮಾವೇಶ ನಡೆಯಲಿದೆ ಎಂದು ರವಿಕುಮಾರ್ ಮಾಹಿತಿ ನೀಡಿದರು.
25 ಸ್ಥಾನಗಳ ಪೈಕಿ ಕನಿಷ್ಠ 15 ಸ್ಥಾನ ಗೆಲ್ಲಲು ರಣತಂತ್ರ ರೂಪಿಸಲಾಗಿದೆ. ಇದಕ್ಕಾಗಿ ನಾಲ್ಕು ತಂಡ ರಚಿಸಲಾಗಿದೆ. ಮಾಜಿ ಸಿಎಂಗಳಾದ ಬಿಎಸ್‌ವೈ, ಜಗದೀಶ್ ಶೆಟ್ಟರ್, ಸದಾನಂದಗೌಡ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಂಡಗಳ ನೇತೃತ್ವ ವಹಿಸಲಿದ್ದಾರೆ ಎಂದರು.