ವಿಜಯಪುರ: ಕೊರೊನಾ ಹಾವಳಿ ಹಾಗೂ ಬೇಡಿಕೆ ಕುಸಿತದಿಂದ ಸ್ಥಗಿತಗೊಂಡಿದ್ದ ಕೂಡಗಿ ಎನ್ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಮತ್ತೆ ವಿದ್ಯುತ್ ಉತ್ಪಾದನೆ ಪುನಾರಂಭಗೊಂಡಿದೆ.
ಪ್ರಸ್ತುತ 2,250 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಎನ್ ಟಿಪಿಸಿ ಘಟಕದಲ್ಲಿ ನಿತ್ಯ 463 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ವಿದ್ಯುತ್ ಕರ್ನಾಟಕವಲ್ಲದೇ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಿಗೆ ಪೂರೈಕೆ ಮಾಡಲಾಗುತ್ತಿದೆ.
ಕೊರೊನಾ ಹಾವಳಿಯಿಂದ ದೇಶಾದಂತ್ಯ ಲಾಕ್ಡೌನ್ ಜಾರಿಯಾದ ಮೇಲೆ ಬೃಹತ್ ಉದ್ಯಮ, ಕೈಗಾರಿಕೆಗಳು ಸ್ಥಗಿತಗೊಂಡ ಮೇಲೆ ವಿದ್ಯುತ್ ಬೇಡಿಕೆ ಇಲ್ಲದೇ ಕೂಡಗಿ ಎನ್ ಟಿಪಿಸಿಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ ರೈಲು ಸಂಚಾರಕ್ಕೆ ನಿರ್ಬಂಧ ಹೇರಿದ ಮೇಲೆ ಹೊರ ರಾಜ್ಯಗಳಿಂದ ಕಲ್ಲಿದ್ದಲು ಆಮದು ಸ್ಥಗಿತಗೊಂಡಿತ್ತು.
ಇದರ ಜೊತೆಗೆ ವಿವಿಧ ಮೂಲಗಳಿಂದ ಕಡಿಮೆ ದರದಲ್ಲಿ ವಿದ್ಯುತ್ ದೊರೆಯುತ್ತಿದ್ದ ಕಾರಣ ವಿದ್ಯುತ್ ಬೇಡಿಕೆ ಮತ್ತಷ್ಟು ಕುಸಿತಗೊಂಡಿತ್ತು. ಈ ಪರಿಣಾಮ ಕಳೆದ ನಾಲ್ಕು ತಿಂಗಳಿಂದ ಎನ್ ಟಿಪಿಸಿಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿತ್ತು. ಇದು ಕಾರ್ಮಿಕರ ಉದ್ಯೋಗ ಕಡಿತಕ್ಕೂ ಕಾರಣವಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ 4 ಸಾವಿರ ಕೂಲಿ ಕಾರ್ಮಿಕರಲ್ಲಿ 3 ಸಾವಿರ ಕಾರ್ಮಿಕರು ತಮ್ಮ ತಮ್ಮ ರಾಜ್ಯಕ್ಕೆ ವಾಪಸ್ ಹೋಗಿದ್ದಾರೆ. ಈಗ ಇರುವ 1 ಸಾವಿರ ಕಾರ್ಮಿಕರಿಂದಲೇ ವಿದ್ಯುತ್ ಉತ್ಪಾದನೆ ಮಾಡಲು ಎನ್ಟಿಪಿಸಿ ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಂಡಿದೆ.
ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡ ವೇಳೆ ಎನ್ಟಿಪಿಸಿ ಬಳಿ 7.6 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹಿಸಿಡಲಾಗಿತ್ತು. ಸದ್ಯ ವಿದ್ಯುತ್ ಉತ್ಪಾದನೆಗೆ ಒಡಿಶಾದ ಸಿಂಗರೇನಿ ಹಾಗೂ ಜಾರ್ಖಂಡ್ನ ಪರ್ಕಿಬಾರವಾಡಿಯಿಂದ ಸದ್ಯ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಹೀಗಾಗಿ ವಿದ್ಯುತ್ ಉತ್ಪಾದನೆಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ಎನ್ ಟಿಪಿಸಿ ಮೂಲಗಳು ತಿಳಿಸಿವೆ.