ಮುದ್ದೇಬಿಹಾಳ: ನಮ್ಮದು ಬಡ ಕುಟುಂಬ. ಆದ್ರೂ ಶ್ರದ್ಧೆವಹಿಸಿ ಮಗಳು 625ಕ್ಕೆ 625 ಅಂಕ ಪಡೆದು ರಾಜ್ಯವೇ ಗುರುತಿಸುವಂತಹ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಆಕೆಯ ಡಾಕ್ಟರ್ ಓದುವ ಕನಸನ್ನು ತನ್ನ ಆಸ್ತಿ ಮಾರಿಯಾದ್ರೂ ಈಡೇರಿಸುವೆ ಎಂದು ತಾಲೂಕಿನ ನಾಲತವಾಡದ ಮಲ್ಲಿಕಾರ್ಜುನ ಹಿರೇಮಠ ತಿಳಿಸಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ಪುತ್ರಿ ಸಂಜನಾ ಹಿರೇಮಠ ಸಾಧನೆಯ ಕುರಿತು ಮಲ್ಲಿಕಾರ್ಜುನ ಹಿರೇಮಠ ಈಟಿವಿ ಭಾರತದೊಂದಿಗೆ ಸಂತಸ ಹಂಚಿಕೊಂಡರು.
ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ಆಕ್ಸ್‌ಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಪುತ್ರಿ ಸಂಜನಾ ಹಿರೇಮಠ ಸಾಧನೆಯಿಂದ ಖುಷಿಯಾಗಿದೆ. ಈ ಸಾಧನೆಯ ಹಿಂದೆ ಸಂಸ್ಥೆಯವರ ಶ್ರಮವೂ ಅಡಗಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿನಿ ಸಂಜನಾ ಹಿರೇಮಠ ಮಾತನಾಡಿ,ಆಕ್ಸ್‌ಫರ್ಡ್ ಪಾಟೀಲ್ ಶಿಕ್ಷಣ ಸಂಸ್ಥೆಯ ಚೇರ್ಮನ್ ಎಂ.ಎಸ್. ಪಾಟೀಲ ಅವರ ಪ್ರೋತ್ಸಾಹ ಹಾಗೂ ಶಿಕ್ಷಕರ ಸಹಕಾರ ಈ ಸಾಧನೆಗೆ ಕಾರಣವಾಗಿದೆ. ನಿರಂತರವಾಗಿ ಪರಿಶ್ರಮ ವಹಿಸಿ ಓದಿದೆ. ಶಿಕ್ಷಕರು ಕಳಿಸುತ್ತಿದ್ದ ಪಾಠಗಳನ್ನು ತಪ್ಪದೇ ಓದುತ್ತಿದ್ದೆ. ಮುಂದೆ ಡಾಕ್ಟರ್ ಆಗುವ ಆಸೆ ಇದೆ ಎಂದು ಹೇಳಿದರು.
ಇದನ್ನೂ ಓದಿ: ಕೋವಿಡ್ ಮೂರನೇ ಅಲೆ ಎದುರಿಸಲು ಧಾರವಾಡ ಜಿಲ್ಲಾಡಳಿತ ಸಜ್ಜು
ಸಂಸ್ಥೆಯ ಚೇರಮನ್ ಎಂ.ಎಸ್. ಪಾಟೀಲ್ ಮಾತನಾಡಿ, ರಾಜ್ಯಮಟ್ಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿ ಸಾಧನೆ ಮಾಡಿರುವುದು ಖುಷಿಯಾಗಿದೆ ಎಂದರು.