ಮುದ್ದೇಬಿಹಾಳ/ವಿಜಯಪುರ: ಜಿಲ್ಲಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಶಾಂತಿಯುತವಾಗಿ ನಡೆದಿದೆ. ಹಿಜಾಬ್ ವಿವಾದ ಹಿನ್ನೆಲೆ ನಗರದ ಪಿಡಿಜೆ ಪದವಿ ಪೂರ್ವ ಕಾಲೇಜು, ಸರ್ಕಾರಿ ಹೈಸ್ಕೂಲ್ ಸೇರಿದಂತೆ ಎಲ್ಲ 147 ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷಾ ಕೋಣೆಗೆ ಹೋಗುವ ಮುನ್ನ ಕಡ್ಡಾಯವಾಗಿ ಹಿಜಾಬ್ ತೆಗೆದು ಹೋಗುವಂತೆ ಪೊಲೀಸರು ಸೂಚಿಸುತ್ತಿದ್ದಾರೆ. ಹೀಗಾಗಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪ್ರತ್ಯೇಕ ಕೊಠಡಿಯಲ್ಲಿಟ್ಟು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಯಾವ ವಿದ್ಯಾರ್ಥಿನಿಯರು ಸಹ ಇದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸದೇ ಹಿಜಾಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ಜ್ಞಾನಭಾರತಿ ವಿದ್ಯಾ ಮಂದಿರದಲ್ಲಿ ಕೇಂದ್ರದ ಅಧೀಕ್ಷಕ ಎಂ.ಎಸ್.ಕವಡಿಮಟ್ಟಿ ವಿದ್ಯಾರ್ಥಿಗಳನ್ನು ಸ್ವಾಗತಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆರೋಗ್ಯ, ಆಶಾ ಇಲಾಖೆಯ ಕಾರ್ಯಕರ್ತರು ಕೇಂದ್ರದಲ್ಲಿ ಹಾಜರಿದ್ದು ಉಸ್ತುವಾರಿ ನೋಡಿಕೊಂಡರು.
ಓರ್ವ ವಿದ್ಯಾರ್ಥಿ ಡಿಬಾರ್: ಜಿಲ್ಲೆಯ ಮುದ್ದೇಬಿಹಾಳದ ಅಭ್ಯುದಯ ಇಂಟರ್ನ್ಯಾಷನಲ್ ಶಾಲೆಯಲ್ಲಿ ಪರೀಕ್ಷೆ ವೇಳೆ ನಕಲು ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಡಿಬಾರ್ ಮಾಡಲಾಗಿದೆ. ಜಿಲ್ಲೆಯ ಒಟ್ಟು 147 ಪರೀಕ್ಷಾ ಕೇಂದ್ರಗಳಲ್ಲಿ 36,318 ಪರೀಕ್ಷಾರ್ಥಿಗಳಲ್ಲಿ 35,616 ವಿದ್ಯಾರ್ಥಿಗಳು ಹಾಜರಾಗಿದ್ದು, 702 ಮಂದಿ ಗೈರಾಗಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಜೊತೆಗೆ ಪರೀಕ್ಷಾ ಕೋಣೆಗೆ ಹಿಜಾಬ್ ಧರಿಸಿ ಬರಬಾರದು ಎಂಬ ಹೈಕೋರ್ಟ್ ಆದೇಶವನ್ನು ಜಿಲ್ಲೆಯಲ್ಲಿ ಎಲ್ಲ ಪರೀಕ್ಷಾರ್ಥಿಗಳು ಪಾಲಿಸಿದ್ದಾರೆ. ಈ ಸಂಬಂಧ ಯಾವುದೇ ಗೊಂದಲದ ವಾತಾವರಣ ನಿರ್ಮಾಣವಾಗಿಲ್ಲ ಎಂದು ಜಿಲ್ಲಾಧಿಕಾರಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಬಳಿ ಹೆಜ್ಜೇನು ದಾಳಿ ; ಐವರು ವಿದ್ಯಾರ್ಥಿಗಳಿಗೆ ಗಾಯ