ವಿಜಯಪುರ : ಚುನಾವಣೆ ಸಂದರ್ಭದಲ್ಲಿ ಮುದ್ದೇಬಿಹಾಳ ಠಾಣೆ ಮಹಿಳಾ ಪಿಎಸ್ಐವೊಬ್ಬರು ವ್ಯಕ್ತಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಭಾರಿ ವೈರಲ್ ವಿಚಾರದ ಸತ್ಯಾಸತ್ಯತೆ ತಿಳಿಯುವ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಎಸ್ಪಿ ಆನಂದಕುಮಾರ್ ತಿಳಿಸಿದ್ದಾರೆ.
ನಾಲತವಾಡ ಪಟ್ಟಣ ಪಂಚಾಯತ್ ಚುನಾವಣೆ ವೇಳೆ ಪಕ್ಷವೊಂದರ ಅಭ್ಯರ್ಥಿಯ ಪರವಾಗಿ ಮುದ್ದೇಬಿಹಾಳ ಪಿಎಸ್‌ಐ ರೇಣುಕಾ ಜಕನೂರ ಅವರು ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ತಾನು ಮುದ್ದೇಬಿಹಾಳದ ಪಿಎಸ್‌ಐ ಎಂದು ಹೇಳಿಕೊಂಡು ವ್ಯಕ್ತಿಯೊಂದಿಗೆ ಮಾತನಾಡಿದ್ದ ಫೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈ ಬಗ್ಗೆ ವಿಜಯಪುರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಎಸ್ಪಿ, ಆಡಿಯೋ ಕುರಿತಂತೆ ಹೆಚ್ಚುವರಿ ಎಸ್ಪಿ ಡಾ. ರಾಮ ಅರಸಿದ್ದಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಸಂಬಂಧಪಟ್ಟ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು.
ಆಡಿಯೋದಲ್ಲಿ ಮಾತನಾಡಿರುವುದು ಮುದ್ದೇಬಿಹಾಳ ಪಿಎಸ್‌ಐ ರೇಣುಕಾ ಜಕನೂರ ಅವರೇ ಎಂಬುದು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮುದ್ದೇಬಿಹಾಳ ಮಹಿಳಾ ಪಿಎಸ್ಐರದ್ದು ಎನ್ನಲಾದ ಆಡಿಯೋ ವೈರಲ್..
ವೈರಲ್ ಆಡಿಯೋ ಬಗ್ಗೆ ಶನಿವಾರ 'ಈಟಿವಿ ಭಾರತ' ಪ್ರತಿನಿಧಿಗೆ ಪ್ರತಿಕ್ರಿಯೆ ನೀಡಿದ್ದ ಪಿಎಸ್‌ಐ ರೇಣುಕಾ ಜಕನೂರ, 'ತಮಗೆ ಯಾವ ಆಡಿಯೋ ಬಗ್ಗೆಯೂ ತಿಳಿದಿಲ್ಲ. ಯಾರ ಜೊತೆಗೂ ಕೂಡ ನಾನು ಮಾತನಾಡಿಲ್ಲ. ಚುನಾವಣೆಯಲ್ಲಿ ಭದ್ರತೆ ಒದಗಿಸುವ ಕರ್ತವ್ಯ ಮಾತ್ರ ನಮ್ಮದಾಗಿದೆ. ಅದನ್ನು ಬಿಟ್ಟು ನಾವೇನು ಮಾಡಿಲ್ಲ' ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಚೀಟಿ ಹೆಸರಲ್ಲಿ ಅಣ್ಣ-ತಮ್ಮರಿಂದ ಕೋಟ್ಯಂತರ ರೂಪಾಯಿ ದೋಖಾ!?