ವಿಜಯಪುರ : ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ಮಗನೇ ತಂದೆ ತಾಯಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಬಿಸನಾಳ ಗ್ರಾಮದ ಶರಣಮ್ಮ ಹಿರೇಮಠ(70), ಹೇಮಯ್ಯ ಹಿರೇಮಠ (75) ಹಲ್ಲೆಗೊಳಗಾದ ಪೋಷಕರು. ಇವರ ಮಗ ಶಂಕ್ರಯ್ಯ ಹಿರೇಮಠ (40) ಹಲ್ಲೆ ಮಾಡಿದ ಪುತ್ರ. ಮದುವೆ ಮಾಡುವಂತೆ ವೃದ್ಧ ತಂದೆ-ತಾಯಿ ಜೊತೆ ಶಂಕ್ರಯ್ಯ ಪ್ರತಿದಿನ ಗಲಾಟೆ ಮಾಡುತ್ತಿದ್ದ. ಆದರೆ, ಇವನಿಗೆ ದುಡಿಮೆ ಇಲ್ಲದ ಕಾರಣ ಮದುವೆ ಮಾಡಲು ಪೋಷಕರು ನಿರಾಕರಿಸಿದ್ದರು.
ಇದ್ರಿಂದ ಕುಪಿತನಾಗಿ ಕಳೆದ ರಾತ್ರಿ ತಂದೆ ತಾಯಿ ಜೊತೆ ಗಲಾಟೆ ಮಾಡಿದ್ದ. ಮಾತಿಗೆ ಮಾತು ಬೆಳೆದು ಬಡಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ವೃದ್ಧ ದಂಪತಿಯನ್ನು ಗ್ರಾಮಸ್ಥರು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.