ವಿಜಯಪುರ: ಕೊಳಗೇರಿ ನಿವಾಸಿಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ತಟ್ಟೆ ಬಾರಿಸುವುದರ ಮೂಲಕ ರಂಗೀನ ಮಸೀದಿ ಹಿಂಭಾಗದ ಕೊಳಗೇರಿ ನಿವಾಸಿಗಳು ಪ್ರತಿಭಟನೆ ನಡಸಿದರು.
ಲಾಕ್‌ಡೌನ್‌ದಿಂದ ಸಂಕಷ್ಟದಲ್ಲಿದ್ದೇವೆ. ಸ್ಲಂ ನಿವಾಸಿಗಳಿಗೆ ಮನೆ ಬಾಡಿಗೆ ಪಾವತಿಸುವುದಿರಲಿ, ತುತ್ತು ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ಎಡಿಸಿ ಔದ್ರಾಮ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಳೆದ 48 ದಿನಗಳಿಂದ ಸ್ಲಂ ನಿವಾಸಿಗಳಿಗೆ ಕೆಲಸವಿಲ್ಲದೆ ಕೈಯಲ್ಲಿ ಕಾಸಿಲ್ಲದೆ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಬೀದಿ ವ್ಯಾಪಾರಿಗಳು, ಆಟೋ ಚಾಲಕರು, ಮೆಕ್ಯಾನಿಕ್‌ಗಳೇ ಈ ಸ್ಲಂನಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಕೊರೊನಾ ದುಡಿಯುವ ಕೈಗಳನ್ನು ಕಟ್ಟಿ ಹಾಕಿದೆ ಎಂದು ಅಳಲು ತೋಡಿಕೊಂಡರು.
ಸರ್ಕಾರ ಮಾತ್ರ ಸ್ಲಂ ನಿವಾಸಿಗಳ ಅಭಿವೃದ್ಧಿಗೆ ಯಾವುದೇ ಪ್ಯಾಕೇಜ್ ಘೋಷಿಸಿಲ್ಲ ಎಂದು ತಟ್ಟೆ ಬಾರಿಸುತ್ತಾ ಸ್ಲಂ ಮಹಿಳೆಯರು ಆಕ್ರೋಶ ಹೊರಹಾಕಿದರು.