ಮುದ್ದೇಬಿಹಾಳ: ತಾಳಿಕೋಟೆ ಪಟ್ಟಣದ ಮುಕ್ತಿಧಾಮ ಸಮಿತಿ ವತಿಯಿಂದ ಡೋಣಿ ನದಿ ದಡದಲ್ಲಿರುವ ಮುಕ್ತಿಧಾಮದಲ್ಲಿ ನೂತನ ಶಿವನ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನಾಳೆ ಬೆಳಗ್ಗೆ 8 ಗಂಟೆಗೆ ನಡೆಯಲಿದೆ.
ಖಾಸ್ಗತೇಶ್ವರ ಮಠದ ಸಿದ್ಧಲಿಂಗದೇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಪುಷ್ಪಾರ್ಚನೆ ಮಾಡಲಿದ್ದಾರೆ. ಮೂಕಿಹಾಳ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ರಾಜಶೇಖರ ಮೇಗೇರಿ ಅವರಿಂದ ನಿರ್ಮಿಸಲ್ಪಟ್ಟಿರುವ ಈ ಸುಂದರ ಶಿವನ ಮೂರ್ತಿಯ ನಿರ್ಮಾಣಕ್ಕೆ 1.70 ಲಕ್ಷ ರೂ. ವೆಚ್ಚವಾಗಿದ್ದು, ಇದನ್ನು ರಾಮಸ್ವರೂಪ ಅಗರವಾಲ ನೀಡಿದ್ದಾರೆ.
2015ರಲ್ಲಿ ಹಾಳು ಕೊಂಪೆಯಾಗಿದ್ದ ಸ್ಮಶಾನದ ಅಭಿವೃದ್ಧಿಗೆ ಪುರಸಭೆ ಹಾಗೂ ಎಲ್ಲಾ ಸಮಾಜದ ನಾಗರಿಕರು ತನು ಮನ ಧನದಿಂದ ನೆರವಾಗಿದ್ದಾರೆ. ಹಸಿರು ಸಂಪದ ಬಳಗದ ಸದಸ್ಯರು ಹಾಗೂ ಎಚ್.ಆರ್.ಎ.ಬಿ.ಸಿ ವತಿಯಿಂದ ಶ್ರಮದಾನ ಮಾಡಲಾಗಿದೆ.