ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಹೆಚ್. ಗ್ರಾಮದಲ್ಲಿ ಹಾಡಹಗಲೇ ನಡೆದ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಒಂದು ಸಮುದಾಯದ ಪ್ರತಿಷ್ಠೆಯೇ ಕೊಲೆಗೆ ಮೂಲ ಕಾರಣ ಎನ್ನಲಾಗ್ತಿದೆ.
ಇದನ್ನು ಓದಿ-ವಿಜಯಪುರ: ಹಣಕಾಸಿನ ವಿಚಾರಕ್ಕೆ ಯುವಕನ ಬರ್ಬರ ಕೊಲೆ
ಗುರುವಾರ ಬೂದಿಹಾಳ ಪಿ.ಹೆಚ್.ಗ್ರಾಮದಲ್ಲಿ ಅನೀಲ್ ನಿಂಬರಗಿ(25) ಎಂಬ ಯುವಕನನ್ನು ದುರ್ಷ್ಕಮಿಗಳು ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಮೃತ ಯುವಕ ಅನೀಲ ನಿಂಬರಗಿ ನಾಲ್ಕು ದಿನಗಳ ಹಿಂದೆ ಗ್ರಾಮದ ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದ. ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವಾಜ್ ಹಾಕಿದ್ದರು ಎಂದು ಹೇಳಲಾಗ್ತಿದೆ.
ಅದೇ ದ್ವೇಷ ಇಟ್ಟುಕೊಂಡು ನಿನ್ನೆ ಮಧ್ಯಾಹ್ನ ಹೋಟೆಲ್ನಲ್ಲಿದ್ದ ಅನೀಲ್ ನಿಂಬರಗಿಯನ್ನು ಹೊರಗೆಳೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಹಾಗೂ ಘಟನೆ ಖಂಡಿಸಿ ಸಿಂದಗಿ ಅಂಬೇಡ್ಕರ್ ಸರ್ಕಲ್ ಬಳಿ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ದರು.
ಸಿಂದಗಿ ಪೊಲೀಸರು ಮೃತ ಯುವಕನ ತಂದೆಯಿಂದ ದೂರು ದಾಖಲಿಸಿಕೊಂಡಿದ್ದರು. ಬೂದಿಹಾಳ ಪಿ.ಹೆಚ್. ಗ್ರಾಮದ ಸಿದ್ದು ಬಿರಾದಾರ ಹಾಗೂ ಸಂತೋಷ ಯಲಗೊಂಡ ಹಾಗೂ ಇತರೆ ಜನರ ಹೆಸರನ್ನು ದೂರಿನಲ್ಲಿ ಅನೀಲ್ ತಂದೆ ಪ್ರಸ್ತಾಪಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಹಿಂದೆಯೂ ಮುದ್ದೇಬಿಹಾಳ ತಾಲೂಕಿನಲ್ಲಿ ಯುವಕನೋರ್ವ ಬೈಕ್ ಮುಟ್ಟಿದ್ದಕ್ಕೆ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈಗ ಸಿಂದಗಿ ತಾಲೂಕಿನಲ್ಲಿ ಇಂತಹದ್ದೇ ಘಟನೆ ಜರುಗಿದೆ.