ವಿಜಯಪುರ : "ನಮ್ಮ ಮೇಲೆ ನಿಮಗೆ ವಿಶ್ವಾಸವಿದೆಯಾ?, ಹಾಗಾದರೆ ಬಿಜೆಪಿಗೆ ನೀವು ಮತ ಹಾಕಿ. ನಿಮ್ಮವರಿಗೂ ಮತ ಹಾಕಲು ಹೇಳಿ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಂತೆ ಅರೆಕ್ಷಣ ಅಲ್ಲಿದ್ದ ಜನರು ಕಕ್ಕಾಬಿಕ್ಕಿಯಾಗಿದ್ದರು. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಈ ಪ್ರಸಂಗ ನಡೆಯಿತು.
ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, "ನಾನು ಅಧಿಕಾರದಲ್ಲಿದ್ದಾಗ ಬಡವರಿಗೆ 7 ಕೆಜಿ ಅಕ್ಕಿ ನೀಡಿದ್ದೇನೆ. ಅದನ್ನು ಬಿಜೆಪಿಯ ಯಡಿಯೂರಪ್ಪ ಸರ್ಕಾರ 5 ಕೆಜಿಗೆ ಇಳಿಸಿತ್ತು. ಉಚಿತವಾಗಿ ನೀಡುವ ಅಕ್ಕಿಯನ್ನು ಕಡಿಮೆ ಮಾಡಬೇಡಿ. ಇದು ಬಡವರಿಗೆ ನೀಡುವ ಕಾರ್ಯಕ್ರಮ, ನಾವು ಹಸಿವು ಮುಕ್ತ ಕರ್ನಾಟಕ ಮಾಡಬೇಕು ಎಂದು ನಾನು ಯಡಿಯೂರಪ್ಪನವರಿಗೆ ಹೇಳಿದ್ದೆ. ಅದಕ್ಕವರು ನಾವೇನು ಮಾಡೋದು?, ನಮ್ಮ ಹತ್ತಿರ ದುಡ್ಡಿಲ್ಲ. ಆ ರೀತಿ ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದರು. ನಾನು ಕೊಡುವುದಾದರೆ ನೀವೇಕೆ ಕೊಡಲು ಸಾಧ್ಯವಿಲ್ಲ. ಸ್ವಲ್ಪ ಲೂಟಿ ಮಾಡೋದನ್ನು ಕಡಿಮೆ ಮಾಡಿ ಎಂದಿದ್ದೆ" ಎಂದರು.
ಇದೇ ವೇಳೆ, ಮಾತಿನ ಭರದಲ್ಲಿ ಸಿದ್ದರಾಮಯ್ಯ, "ಜನರೇ ನಿಮಗೆ ನಮ್ಮ ಮೇಲೆ ವಿಶ್ವಾಸವಿದೆಯಾ? ನಮ್ಮ ಸರ್ಕಾರ ತನ್ನಿ. 7 ಕೆಜಿ ಅಕ್ಕಿಯ ಬದಲು 10 ಕೆಜಿ ಉಚಿತವಾಗಿ ನೀಡುತ್ತೇನೆ. ಹಾಗಾಗಿ ನಮ್ಮ ಮೇಲೆ ವಿಶ್ವಾಸವಿಟ್ಟು ಬಿಜೆಪಿಗೆ ನೀವು ಮತ ನೀಡಿ, ನಿಮ್ಮವರಿಗೂ ಮತ ನೀಡಲು ಹೇಳಿ" ಎಂದರು. ನಂತರ ಸಾವರಿಸಿಕೊಂಡ ಅವರು, ಇಲ್ಲ ಕಾಂಗ್ರೆಸ್ಗೆ ಮತ ಹಾಕಿ ಎಂದು ತಪ್ಪು ಸರಿಪಡಿಸಿಕೊಂಡರು.
ಚುನಾವಣೆ ಘೋಷಣೆಗಳು ಜಾರಿಗೆ: ಈ ವರ್ಷ 2,65,720 ಲಕ್ಷ ಕೋಟಿ ರೂ ಬಜೆಟ್ ಇದೆ. ನಾವು ಬಂದಮೇಲೆ 3.15 ಲಕ್ಷ ಕೋಟಿ ರೂ ಬಜೆಟ್ ಆಗುತ್ತದೆ. ನಾನು ಘೋಷಣೆ ಮಾಡಿರುವ ಯೋಜನೆಗಳನ್ನು ಜಾರಿಗೆ ತರುತ್ತೇನೆ. ಬಿಜೆಪಿಯವರು ಮಾಡಿದ ಘೋಷಣೆಗಳನ್ನು ಜಾರಿ ಮಾಡೋಕೆ ಆಗಲ್ಲ ಎಂದು ಹೇಳುತ್ತಾರೆ. ಆದರೆ ನಾವು ಮಾಡಿ ತೋರಿಸ್ತೀವಿ. ಒಂದು ವೇಳೆ ಕಾರ್ಯಕ್ರಮ ಜಾರಿ ಮಾಡದಿದ್ದರೆ ಒಂದು ಕ್ಷಣವೂ ಅಧಿಕಾರದಲ್ಲಿ ಇರೋದಿಲ್ಲ, ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು.
'ಸಿದ್ದು ಜೀವನ ಗಾನ' ಆಲ್ಬಮ್: ರಾಜ್ಯದ ಅಭಿವೃದ್ಧಿಗೆ ಸಿದ್ದರಾಮಯ್ಯನವರ ಕೊಡುಗೆಗಳನ್ನು ಹಾಡಿ ಹೊಗಳುವ ಗೀತೆಯೊಂದನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ. ಹೈದರಾಬಾದ್ ಮೂಲದ ಸಿದ್ದರಾಮಯ್ಯ ಅಭಿಮಾನಿ ಮತ್ತು ಉದ್ಯಮಿ ಶ್ರೀಧರ್ ರಾವ್ ಅವರು ಸಿದ್ದರಾಮಯ್ಯ ಜೀವನ ಕುರಿತ ಆಲ್ಬಂ ಸಾಂಗ್ ಸಿದ್ಧಪಡಿಸಿದ್ದರು. ಇದಕ್ಕಾಗಿ ಸಿದ್ದರಾಮಯ್ಯನವರ ತವರಿಗೆ ತೆರಳಿ, ಬಾಲ್ಯದ ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಹಾಡು ಕನ್ನಡ, ತೆಲುಗು ಭಾಷೆಗಳಲ್ಲಿದೆ. ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಭೀಮರಾವ್ ಶಿಂಧೆ ಹಾಡು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಫೆಬ್ರವರಿ 17ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಲು ಸಿದ್ದರಾಮಯ್ಯ ನಿರ್ಧಾರ