ವಿಜಯಪುರ: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವ ಎಂತಹದ್ದು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ದೇಶಕ್ಕೆ ಅವರ ಕೊಡುಗೆ ಏನು ಎಂಬುದನ್ನು ನಾವೆಲ್ಲರೂ ನೆನೆಯಬೇಕು. ಹೀಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಕಪಿಸಿಸಿ ಕಾರ್ಯಾಧ್ಯಕ್ಷ ಪ್ರಿಯಾಂಕ ಖರ್ಗೆ ಅವರಿಗೆ ಸಚಿವೆ ಶಶಿಕಲಾ ಜೊಲ್ಲೆ ತಿರುಗೇಟು ನೀಡಿದರು.
ನಗರದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಾಜಪೇಯಿ ಅವರು ಅಜಾತಶತ್ರು. ದೇಶಾಭಿಮಾನ ಬಿಟ್ಟು ಅವರು ಬೇರೆ ವಿಚಾರ ಮಾಡುತ್ತಿರಲಿಲ್ಲ. ಪ್ರಧಾನಿ ಆಗಿದ್ದ ವೇಳೆ ದೇಶಕ್ಕೆ ಕೊಟ್ಟ ಕೊಡುಗೆ ಏನು ಎಂಬುದನ್ನು ನಾವೆಲ್ಲರೂ ನೆನೆಯಬೇಕು. ಅಂತಹವರ ಬಗ್ಗೆ ಹಗುರವಾಗಿ ಮಾತನಾಡುವುದು ತಪ್ಪು ಎಂದರು.
'ಕೋವಿಡ್ ಮೂರನೇ ಅಲೆ ಬರುವ ಸಾಧ್ಯತೆ'
ಇದಕ್ಕೂ ಮುನ್ನ ನಗರದ ಹೊರವಲಯದ ತೊರವಿಯಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ ದಿನಾಚರಣೆಯಲ್ಲಿ ಭಾಗವಹಿಸಿ ನಂತರ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆ ಬರುವ ಸಾಧ್ಯತೆಗಳಿವೆ ಎಂದು ತಜ್ಞರು ಮಾಹಿತಿ ನೀಡಿದ್ದಾಗಿ ತಿಳಿಸಿದರು.
ಕೋವಿಡ್ 3ನೇ ಅಲೆ ನಿಯಂತ್ರಣಕ್ಕಾಗಿ ಮಕ್ಕಳಿಗಾಗಿ 21 ಖಾಸಗಿ ಹಾಗೂ 9 ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 863 ಹಾಸಿಗೆ ಲಭ್ಯತೆ ಇದೆ. 519 ಜನರಲ್ ವಾರ್ಡ್, 30 ವೆಂಟಿಲೇಟರ್ಸ್ ಜೊತೆಗೆ 231 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಅಗತ್ಯಕ್ಕೆ ತಕ್ಕಂತೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿದೆ. ಇದರ ಜತೆ 560 ಜಂಬೋ ಸಿಲೆಂಡರ್ ಪೊರೈಸಲು ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಯತ್ನಾಳ- ಜಿಗಜಿಣಗಿ ದೂರ ದೂರ:
ಹಲವು ವರ್ಷಗಳಿಂದ ಮುನಿಸಿಕೊಂಡಿರುವ ಸಂಸದ ರಮೇಶ ಜಿಗಜಿಣಗಿ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರೂ ಅಂತರ ಕಾಯ್ದುಕೊಳ್ಳುವ ಮೂಲಕ ತಮ್ಮ ಮುನಿಸು ಮುಂದುವರೆಸಿದರು. ಮೊದಲ ಸಾಲಿನಲ್ಲಿ ಇಬ್ಬರೂ ಕುಳಿತಿದ್ದರೂ ಎರಡು ಖುರ್ಚಿ ಮಧ್ಯೆ ಖಾಲಿ ಜಾಗ ಬಿಟ್ಟಿದ್ದರು.