ವಿಜಯಪುರ: ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಈ ಬಾರಿಯೂ ಜನರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಹೀಗಾಗಿ ಕೆಲವೆಡೆ ಇಡೀ ಗ್ರಾಮದ ಮನೆಗಳಿಗೆ ಬೀಗ ಜಡಿದು ಜನ್ರು ದುಡಿಯೋಕೆ ಹೋಗಿರುವ ದೃಶ್ಯಗಳು ಕಂಡುಬಂದಿವೆ.
ಹೌದು, ವಿಜಯಪುರ ಜಿಲ್ಲೆಯ ಬಹುತೇಕ ಗ್ರಾಮಗಳ ಜನರು ಉದ್ಯೋಗ ಅರಸಿ ಅನ್ಯ ರಾಜ್ಯಗಳಿಗೆ ಗುಳೇ ಹೋಗುತ್ತಾರೆ. ಅವರಲ್ಲಿ ಹೆಚ್ಚಿನವರು ತಾಂಡಾಗಳ ಜನರೇ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಕುಟುಂಬ ಸಮೇತ ತೆರಳುತ್ತಿದ್ದಾರೆ. ಹೀಗೆ ಹೋಗುವ ಸಂದರ್ಭದಲ್ಲಿ ತಮ್ಮ ಮನೆಯ ಬಾಗಿಲಿಗೆ ಮುಳ್ಳು ಕಂಟಿ ಹಾಕಿ ಹೋಗುತ್ತಾರೆ. ಒಮ್ಮೆ ಉದ್ಯೋಗ ಅರಸಿ ಅನ್ಯ ರಾಜ್ಯಗಳಿಗೆ ಗುಳೇ ಹೋದರೆ ಕಡಿಮೆ ಎಂದರೂ ಏಳೆಂಟು ತಿಂಗಳು ಕಾಲ ಇವರು ಮರಳಿ ತಮ್ಮ ತಾಂಡಾಗಳಿಗೆ ಬರುವುದಿಲ್ಲ. ಅದರಲ್ಲಂತೂ ವಿಜಯಪುರ ತಾಲೂಕಿನ ಭೂತನಾಳ ಸೇರಿದಂತೆ, ಮದಬಾವಿ ತಾಂಡ 1 ಹಾಗೂ 2 ರಲ್ಲಿ ಹೆಚ್ಚಿನವರು ಅನ್ಯ ರಾಜ್ಯಗಳಿಗೆ ದುಡಿಯಲು ವಲಸೆ ಹೋಗ್ತಾರೆ. ಈ ವೇಳೆ ಕುಟುಂಬಸ್ಥರು ಕಣ್ಣೀರು ಹಾಕುವ ದೃಶ್ಯಗಳು ಮನಕಲಕುವಂತಿವೆ.
ಇವರು ಇಡೀ ಕುಟುಂಬ ಸಮೇತವಾಗಿ ಗುಳೇ ಹೋಗುತ್ತಾರೆ, ಮನೆಯಲ್ಲಿ ವಯೋವೃದ್ಧ ತಂದೆ ತಾಯಂದಿರು ಇದ್ದರಷ್ಟೇ ಅವರ ಬಳಿ ಮಕ್ಕಳನ್ನು ಶಿಕ್ಷಣದ ಉದ್ದೇಶದಿಂದ ಬಿಟ್ಟು ಹೋಗುತ್ತಾರೆ. ಮನೆಯಲ್ಲಿ ನೋಡಿಕೊಳ್ಳುವವರು ಇರದೇ ಇದ್ದಂತಹ ಸಂದರ್ಭದಲ್ಲಿ ಮಕ್ಕಳನ್ನು ಸಹ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಹೀಗಾಗಿ ಚಿಣ್ಣರು ಶಿಕ್ಷಣದಿಂದ ವಂಚಿತರಾಗುವುದು ತಾಂಡಾಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ.
ಕೆಲಸ ಸಿಗದ ಹಿನ್ನೆಲೆಯಲ್ಲಿ ವರ್ಷದಲ್ಲಿ 6 ತಿಂಗಳು ಕುಟುಂಬ ಸಮೇತ ಗುಳೆ ಹೋಗುತ್ತೇವೆ. ಮಳೆಗಾಲದಲ್ಲಿ ಊರಿಗೆ ಬಂದು ಮತ್ತೆ ಒಂದಷ್ಟು ತಿಂಗಳು ಇಲ್ಲಿ ವಾಸಿಸುತ್ತೇವೆ. ನಮಗೆ ಸರ್ಕಾರ ಸೂಕ್ತ ದಾರಿ ಮಾಡಿ ಕೊಡಬೇಕು ಎಂದು ಗುಳೆ ಹೊರಟ ಗ್ರಾಮಸ್ಥರೊಬ್ಬರು ಮನವಿ ಮಾಡಿದ್ದಾರೆ.
ಊರಿನ ಜನರೆಲ್ಲ ವಲಸೆ ಹೋಗುತ್ತಾರೆ. ಇದರಿಂದ ಮಕ್ಕಳ ಶಿಕ್ಷಣ ಸರಿಯಾಗುತ್ತಿಲ್ಲ. ಸರ್ಕಾರ ಇಲ್ಲೇ ಉದ್ಯೋಗ ಕಲ್ಪಿಸಿದ್ರೆ ನಾವು ಇಲ್ಲೇ ಇದ್ದು, ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಬಹುದು. ವಲಸೆ ಹೋಗುವಾಗ ಮನೆಗಳಿಗೆ ಮುಳ್ಳು ಕಂಟಿ ಹಾಕಿ ಹೋಗುತ್ತೇವೆ ಎಂದು ಗ್ರಾಮದ ಮಹಿಳೆ ತಿಳಿಸಿದ್ದಾರೆ.
ಜನರು ಗುಳೇ ಹೋಗುವುದನ್ನು ತಡೆಯಲು ಸರ್ಕಾರ ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿಯಡಿ ಎಲ್ಲರಿಗೂ ಕೆಲಸ ನೀಡುತ್ತಿದೆ. ಅದರಲ್ಲೇ ದುಡಿದು ಜನರು ಬದುಕು ಕಟ್ಟಿಕೊಳ್ಳಲಿ ಎಂಬ ಉದ್ದೇಶದಿಂದ ಇದು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾರಿಯಲ್ಲಿದೆ. ಆದ್ರೆ ಇಲ್ಲಿನ ಜನ್ರು ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ ಉದ್ಯೋಗ ಖಾತ್ರಿ ಎಷ್ಟರ ಮಟ್ಟಿಗೆ ತಾಂಡಾ ಜನರಿಗೆ ಮುಟ್ಟುತ್ತಿದೆ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ.
ಇದನ್ನೂ ಓದಿ: ನರೇಗಾ ಯೋಜನೆ ಎಫೆಕ್ಟ್: ಭತ್ತದ ಕಟಾವು ಮುಗಿಯೋವರೆಗೂ ಒಂದು ತಿಂಗಳು ಕಾರ್ಮಿಕರಿಗೆ ನರೇಗಾ ಕೆಲಸ ಬಂದ್