ಮುದ್ದೇಬಿಹಾಳ: ಅದು 1990ರ ದಶಕ. ಆಗಿನ್ನೂ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿರಲಿಲ್ಲ. ಅಂತಹ ಸಂಕಷ್ಟದ ಕಾಲಘಟ್ಟದಲ್ಲಿ ತಮ್ಮ ಕೈ ಕೆಳಗೆ ಓದುವ ಮಕ್ಕಳು ಚೆನ್ನಾಗಿ ಅಕ್ಷರಾಭ್ಯಾಸ ಮಾಡಲಿ ಎಂದು ಕಂದೀಲು ಹಿಡಿದು ಮನೆ ಮನೆಗೆ ತೆರಳಿ ಅವರಿಗೆ ಅಕ್ಷರಾಭ್ಯಾಸ ಮಾಡಿಸಿದ್ದ ಶಿಕ್ಷಕರೊಬ್ಬರನ್ನು ವಿದ್ಯಾರ್ಥಿಗಳು ಆತ್ಮೀಯವಾಗಿ ಸನ್ಮಾನಿಸಿ ಆರೋಗ್ಯ ವಿಚಾರಿಸಿದ್ದಾರೆ.
ಟಿ.ಡಿ.ರಾಯಚೂರ ಪಟ್ಟಣದ ಕೆಬಿಎಂಪಿಎಸ್ ಶಾಲೆಯಲ್ಲಿ ಸೇವೆ ಸಲ್ಲಿಸಿ ಸದ್ಯಕ್ಕೆ ನಿವೃತ್ತರಾಗಿ ಕಿಲ್ಲಾದಲ್ಲಿನ ತಮ್ಮ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ. ವಿದ್ಯುತ್ ವ್ಯವಸ್ಥೆ ಇಲ್ಲದ ಕಾಲದಲ್ಲಿ ರಾತ್ರಿಯ ಸಮಯದಲ್ಲಿ ಪಟ್ಟು ಬಿಡದೆ ಕಂದೀಲು ಹಿಡಿದುಕೊಂಡು ವಿದ್ಯಾರ್ಥಿಗಳ ಮನೆಗೆ ತೆರಳಿ ಅವರಿಗೆ ಪಾಠ ಮಾಡಿ ವಿದ್ಯಾವಂತರನ್ನಾಗಿಸಿದ್ದ ಕೀರ್ತಿ ರಾಯಚೂರ ಅವರಿಗಿದೆ.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಇವರ ಮನೆಗೆ ಆಗಮಿಸಿದ ಇವರ ವಿದ್ಯಾರ್ಥಿಗಳು ಆತ್ಮೀಯ ಗುರುಗಳಿಗೆ ಸನ್ಮಾನ ಮಾಡಿ, ಆರೋಗ್ಯ ವಿಚಾರಿಸಿದರು. ಈ ವೇಳೆ ವಿದ್ಯಾರ್ಥಿಗಳಾದ ಮಹಾತೇಶ ಬೂದಿಹಾಳಮಠ, ಸಂಗಯ್ಯ ಸಾರಂಗಮಠ, ಬಸವರಾಜ ಹುರಕಡ್ಲಿ, ಮಹ್ಮದ್ ರಫೀಕ ಶಿರೋಳ, ಸದ್ದಾಂ ಕುಂಟೋಜಿ, ಆರೀಫ ವಾಲಿಕಾರ ಸೇರಿದಂತೆ ಮತ್ತಿತರರು ಇದ್ದರು.