ವಿಜಯಪುರ: ಭೂಮಿಯ ಸದ್ದಿಗೆ ಕಾರಣವಾಗುತ್ತಿರುವ ವಿಜಯಪುರ ಜಿಲ್ಲೆಯ ಕೆಲ ಗ್ರಾಮಗಳಿಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವೈಜ್ಞಾನಿಕ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಳೆದ ಹಲವು ವರ್ಷಗಳಿಂದ ಭೂಕಂಪನ ಆಗುತ್ತಿದೆ ಎಂದು ಆತಂಕಗೊಂಡ ಗ್ರಾಮಗಳಿಗೆ ವಿಜ್ಞಾನಿಗಳು ಭೇಟಿ ಕೊಟ್ಟು ಮಾಹಿತಿ ಪಡೆದರು.
ಬಬಲೇಶ್ವರದ ಅಡಿವಿ ಸಂಗಾಪುರ, ಸೋಮದೇವರಹಟ್ಟಿ, ಸಿದ್ದಾಪುರ ತಕ್ಕಳಿಕೆ, ಮಲಕನ ದೇವರಹಟ್ಟಿ ಹಾಗೂ ಕೋಲ್ಹಾರದ ಮಸೂತಿ ಹಾಗೂ ಮಲಗಾನ ಗ್ರಾಮಸ್ಥರು ಈ ವೇಳೆ ಅಳಲು ತೋಡಿಕೊಂಡರು. ಹಲವು ವರ್ಷಗಳಿಂದ ರಾತ್ರಿ ವೇಳೆ ಭೂಮಿಯ ಸದ್ದಿನ ಅನುಭವ ಆಗುತ್ತಿದೆ. ಹೀಗಾಗಿ, ಮನೆಯಲ್ಲಿ ವಾಸಿಸಲು ಹೆದರಿಕೊಳ್ಳುವಂತಾಗಿದೆ. ಜೀವ ಕೈಯಲ್ಲಿಡಿದುಕೊಳ್ಳಬೇಕಾಗಿದೆ ಎಂದು ವಿಜ್ಞಾನಿಗಳಿಗೆ ತಮ್ಮ ಸಮಸ್ಯೆಯನ್ನು ಗ್ರಾಮಸ್ಥರು ಹೇಳಿಕೊಂಡರು.
ತ್ರಿಕೋಟದ ಸಿದ್ದಾಪುರ ಕೆ.ಗ್ರಾಮದ ಪಂಚಾಯತ್‌ನಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ರಾಜ್ಯ ನೈಸರ್ಗಿಕ ವಿಕೋಪದ ಕೇಂದ್ರ ಅಧಿಕಾರಿ ಜಗ್ಗೇಶ್ (ವಿಜ್ಞಾನಿ), ಅತಿವೃಷ್ಟಿಯ ಕಾರಣ ಭೂಮಿಯ ಆಳದಲ್ಲಿ ಘರ್ಷಣೆ ಶಬ್ದ ಕೇಳಿ ಬರುತ್ತದೆ. ಹೀಗಾಗಿ, ಶಬ್ದ ಕೇಳಿ ಬರುವ ಗ್ರಾಮಗಳಿಗೆ ಭೇಟಿ ನೀಡಿದ್ದೇವೆ.
ಭೂಮಿಯಲ್ಲಿ ಜಲದ ಮಟ್ಟ ಹೆಚ್ಚಾಗಿರುವ ಕಾರಣ ಹೀಗಾಗುತ್ತಿದೆ. ಕಾಲಕ್ರಮೇಣ ಅದು ಕಡಿಮೆ ಆಗುತ್ತದೆ. ಜನರು ಆತಂಕ ಪಡಬಾರದು ಎಂದು ಧೈರ್ಯ ತುಂಬಿದರು.