ವಿಜಯಪುರ: ಜಿಲ್ಲೆಯಲ್ಲಿ ಎಂದೂ ಕಂಡರಿಯದ ಮಹಾಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಸವನಬಾಗೇವಾಡಿ-ದೇವರಹಿಪ್ಪರಗಿ ಸಂಪರ್ಕಿಸುವ ಸಾತಿಹಾಳ ಸೇತುವೆ ಹಾಗೂ ಸಾತಿಹಾಳ ಸೇತುವೆ ಬಳಿ ಇರುವ ಸ್ಮಶಾನ ಕೂಡ ನೀರಿನಲ್ಲಿ ಮುಳುಗಿದೆ.
ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದ ಹೊರ ಭಾಗದ ಡೋಣಿ ನದಿಯ ಎರಡನೇ ಅತಿ ಉದ್ದದ ಸಾತಿಹಾಳ ಸೇತುವೆ ದೇವರಹಿಪ್ಪರಗಿ- ಬಸವನಬಾಗೇವಾಡಿ ತಾಲೂಕುಗಳನ್ನು ಸಂಪರ್ಕಿಸುತ್ತದೆ. ಈ ಸೇತುವೆ ಮುಳುಗಡೆಯಾದರೆ, ಜನರು 60-70 ಕಿ.ಮೀ ಸುತ್ತುವರೆದುಕೊಂಡು ಬರಬೇಕಾದ ಪರಿಸ್ಥಿತಿ ಇದೆ. ಹಳೆಯ ಸೇತುವೆಯಾಗಿರುವ ಕಾರಣ ಶಿಥಿಲಗೊಂಡಿದ್ದು, ಅಪಾಯ ಸಂಭವಿಸಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದೇ ಸೇತುವೆಗೆ ಹೊಂದಿಕೊಂಡಿರುವ ಸ್ಮಶಾನ ಕೂಡ ಮುಳುಗಡೆಯಾಗಿದೆ. ಇನ್ನು ಸೇತುವೆ ದುರಸ್ಥಿ ಕಾರ್ಯ ನಡೆಸದೇ ಇದ್ದರೆ ಅದೂ ಕೂಡಾ ಒಡೆದು ಅಪಾರ ಪ್ರಮಾಣದ ನೀರು ಗ್ರಾಮಕ್ಕೆ ನುಗ್ಗುವ ಆತಂಕ ಎದುರಾಗಿದೆ ಎನ್ನುತ್ತಾರೆ ಸ್ಥಳೀಯರು.
ಬೆಳೆ ನಾಶ:
ಡೋಣಿ ನದಿ ನೀರನ್ನು ನಂಬಿಕೊಂಡು ಪ್ರತಿ ವರ್ಷ ಸಾತಿಹಾಳ ಗ್ರಾಮಸ್ಥರು ತೊಗರಿ, ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ಹತ್ತಾರು ಬೆಳೆಗಳನ್ನು ಬೆಳೆಯುತ್ತಾರೆ. ಆದರೆ, ಈ ಬಾರಿ ಡೋಣಿ ನದಿಗೆ ಪ್ರವಾಹ ಬಂದ ಕಾರಣ ಸಾತಿಹಾಳ ಸೇತುವೆ ಭರ್ತಿಯಾಗಿ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.