ವಿಜಯಪುರ: ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಯುತ್ತಿರುವುದು ಅಪ್ರಸ್ತುತ. ಸದ್ಯ ಕುರುಬರು, ಒಕ್ಕಲಿಗರು ಸಿಎಂ ರೇಸ್ನಲ್ಲಿದ್ದಾರೆ. ಇನ್ನು ಹಲವು ಜಾತಿ ಮುಖಂಡರು ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಚುನಾವಣೆ ನಡೆಯಲಿ, 113 ಸ್ಥಾನ ದೊರೆತಾಗ ಮುಂದಿನ ಸಿಎಂ ಯಾರಾಗಬೇಕು ಎನ್ನುವ ಚರ್ಚೆ ನಡೆಯಲಿದೆ. ಸಿಎಂ ರೇಸ್ನಲ್ಲಿ ಘಟಾನುಘಟಿಗಳು ಇರುವಾಗ ನಾನು ಸಿಎಂ ಆಗುವ ಆಸೆಯೇ ಹೊಂದಿಲ್ಲ. ಮುಂದೆ ನೋಡೋಣ ಅವಕಾಶ ಸಿಕ್ಕರೆ ಚಿಂತನೆ ಮಾಡೋಣ ಎಂದು ತಮ್ಮ ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಬಿಜೆಪಿ ಮೊದಲಿನಿಂದಲೂ ಹಿಂಬಾಗಿಲು ರಾಜಕಾರಣ ಮಾಡುತ್ತಿದೆ. ಕರ್ನಾಟಕದಲ್ಲಿ ಸಾಕಷ್ಟು ಶಾಸಕರನ್ನು ಇಡಿ ಹೆಸರಿನಲ್ಲಿ ಹೆದರಿಸಿ ಅಧಿಕಾರ ಪಡೆದುಕೊಂಡಿದೆ. ಇದೇ ಮೊನ್ನೆ ಮಹಾರಾಷ್ಟ್ರದಲ್ಲಿ ಶಿವಸೇನೆಯ 40 ಶಾಸಕರನ್ನು ಸೆಳೆದು ಅಧಿಕಾರ ಹಿಡಿದಿದೆ. ಇದೆಲ್ಲ ಜನ ನೋಡುತ್ತಿದ್ದಾರೆ. ಅದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದರು.
ಮಾಜಿ ಸ್ಪೀಕರ್ ರಮೇಶ್ಕುಮಾರ್ ಇತ್ತೀಚಿಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಹೇಳಿದ್ದು ಬೇರೆ ಅರ್ಥದಲ್ಲಿ. ಆದರೆ, ಬಿಂಬಿತವಾಗಿರುವುದೇ ಬೇರೆಯಾಗಿದೆ ಎಂದರು.
ಕಾಂಗ್ರೆಸ್ ಪ್ರತಿಭಟನೆ: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಒಳಪಡಿಸಿರುವುದನ್ನು ಖಂಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಗಾಂಧಿವೃತ್ತದಲ್ಲಿ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯ ಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತನಿಖಾ ಸಂಸ್ಥೆಗಳನ್ನು ಕೇಂದ್ರ ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಓದಿ: ನೀವು ಹೇಳಿದಂತೆ ಕೇಳ್ಕೊಂಡು ಇರುತ್ತೇನೆ ಎಂದು ಬ್ರಿಟಿಷರಿಗೆ ಸಾವರ್ಕರ್ ಕ್ಷಮಾಪಣಾ ಬರೆದುಕೊಟ್ಟಿದ್ರು: ಸಿದ್ದರಾಮಯ್ಯ