ವಿಜಯಪುರ : ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿವೆ. ಇದರಿಂದ ಆಸ್ಪತ್ರೆಗಳಲ್ಲಿ ಕ್ರಮೇಣ ಬೆಡ್ ಕೊರತೆಯೂ ಉಂಟಾಗುವ ಸಾಧ್ಯತೆಯಿದೆ.
ಈ ನಡುವೆ ಗರ್ಭಿಣಿಯರ ಆರೋಗ್ಯ ಕಾಪಾಡಿ ಸುರಕ್ಷಿತ ಹೆರಿಗೆ ಮಾಡಿಸಲು ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಗು ಆರೈಕೆ ಕಟ್ಟಡದಲ್ಲಿ ಆರೋಗ್ಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ನೂರು ಬೆಡ್ಗಳಿರುವ ಈ ಹೆರಿಗೆ ಆಸ್ಪತ್ರೆಗೆ ಪಕ್ಕದ ಜಿಲ್ಲೆಗಳಿಂದ ಮತ್ತು ನೆರೆಯ ಮಹಾರಾಷ್ಟದಿಂದಲೂ ಗರ್ಭಿಣಿಯರು ಹೆರಿಗೆಗೆಂದು ಬರುತ್ತಾರೆ. ಇದೀಗ ಜನರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ 90 ಬೆಡ್ಗಳನ್ನು ಸೇರಿಸಲಾಗಿದೆ.
ಈ ಮೂಲಕ 190 ಬೆಡ್ಗಳ ಹೆರಿಗೆ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿದೆ. ನಿತ್ಯ ಇಲ್ಲಿ ಸಹಜ ಹಾಗೂ ಸಿಸೇರಿಯನ್ ಹೆರಿಗೆ ಮೂಲಕ ಸುಮಾರು 40 ಮಹಿಳೆಯರು ಸುರಕ್ಷಿತವಾಗಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ.
ಓದಿ : ಪಿರಿಯಾಪಟ್ಟಣದಲ್ಲಿ ಆಕ್ಸಿಜನ್ ಸಿಗದೇ ಕೋವಿಡ್ ಸೋಂಕಿತ ಮಹಿಳೆ ಸಾವು
ಕೋವಿಡ್ ಮೊದಲನೇ ಅಲೆ ಬಂದ ಸಂದರ್ಭದಲ್ಲಿ ಒಂದು ಕೋವಿಡ್ ಪೀಡಿತ ಗರ್ಭಿಣಿಗೆ ಹೆರಿಗೆ ಮಾಡಿಸಿದರೆ, ಅದು ದೊಡ್ಡ ಮಟ್ಟದ ಸಾಧನೆಯಾಗುತ್ತಿತ್ತು. ಆದರೆ, ಈ ಆಸ್ಪತ್ರೆಯಲ್ಲಿ ಒಂದು ವಾರದಲ್ಲಿ ನಾಲ್ವರು ಕೋವಿಡ್ ಪೀಡಿತರಿಗೆ ಸುರಕ್ಷಿತ ಹೆರಿಗೆ ಮಾಡಿಸಲಾಗಿದೆ.
ಜಿಲ್ಲಾಸ್ಪತ್ರೆಯ ವೈದ್ಯರ ಕಾರ್ಯಕ್ಕೆ ಸ್ವತಃ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಿಲ್ಲಾಸ್ಪತ್ರೆಯ ವೈದ್ಯರು ಹಗಲು ರಾತ್ರಿ ಸೇವೆ ಮಾಡುತ್ತಿದ್ದಾರೆ. ಅವರಿಗೆ ಸಾರ್ವಜನಿಕರು ತೊಂದರೆ ಕೊಡಬಾರದು, ಸಮಸ್ಯೆ ಇದ್ದರೆ ನಮ್ಮ ಬಳಿ ಬನ್ನಿ ಎಂದು ಮನವಿ ಮಾಡಿದ್ದಾರೆ.
ಕೋವಿಡ್ ಹಿನ್ನೆಲೆ ಒಬ್ಬರು ಹೆರಿಗೆ ವೈದ್ಯ ಹಾಗೂ ಓರ್ವ ಅನಸ್ತೇಸಿಯಾ ವೈದ್ಯರನ್ನು ಸಿಸೇರಿಯನ್ ಮಾಡಲು ಬಳಸಲಾಗುತ್ತಿದೆ. ಹೆರಿಗೆಗೆಂದು ಬರುವ ಗರ್ಭಿಣಿಯರ ಸಂಖ್ಯೆ ಹೆಚ್ಚಳ ಹಾಗೂ ವೈದ್ಯರ ಕೊರತೆ ಹಿನ್ನೆಲೆ, ಎಷ್ಟು ಸಾಧ್ಯವೋ ಅಷ್ಟು ಉತ್ತಮ ಸೇವೆ ನೀಡಲಾಗುತ್ತಿದೆ ಎನ್ನುತ್ತಾರೆ ವೈದ್ಯರು.