ವಿಜಯಪುರ: ಭಾರತದ ವ್ಯಾಪ್ತಿಯೊಳಗೆ ನುಗ್ಗಿ ಗಡಿಭಾಗಗಳನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದ ಶತ್ರು ರಾಷ್ಟ್ರ ಪಾಕಿಸ್ತಾನ ಮತ್ತು ಭಾರತೀಯ ಯೋಧರ ನಡುವೆ ನಡೆದ 65 ದಿನಗಳ ಆಪರೇಷನ್ ವಿಜಯ ಯುದ್ಧದ ಸನ್ನಿವೇಶನಗಳನ್ನು ಚೀನಾ ಗಡಿ ಕಾಯುತ್ತಿದ್ದ ವಿಜಯಪುರ ಮೂಲದ ನಿವೃತ್ತ ಯೋಧ ನಾರಾಯಣಸಾ ಸೂರ್ಯವಂಶಿ 'ಈಟಿವಿ ಭಾರತ'ದ ಜೊತೆ ಹಂಚಿಕೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಗಡಿಭಾಗದ ನಿಯಮಗಳನ್ನು ಉಲ್ಲಂಘಿಸಿ ಪಾಕಿಸ್ತಾನದ ಸೇನೆ ಆಪರೇಷನ್ ಬದರ್ ಹೆಸರಿನಲ್ಲಿ ಭಾರತದ ಪುಣ್ಯಭೂಮಿಯೊಳಗೆ ನುಗ್ಗಿತ್ತು. ಅದನ್ನು ದಿಟ್ಟವಾಗಿ ಎದುರಿಸಲು ಭಾರತೀಯ ಸೇನೆ ಸಹ ಆಪರೇಷನ್ ವಿಜಯ ಹೆಸರಿನಲ್ಲಿ ಹೆಜ್ಜೆ ಇಟ್ಟಿತ್ತು. 1999ರಲ್ಲಿ ಆಪರೇಷನ್ ವಿಜಯ ಹೆಸರಿನಲ್ಲಿ 10 ಪಡೆಗಳು ಸಿದ್ಧಗೊಂಡಿದ್ದವು. ನಾಗಾ ರೆಜಿಮೆಂಟ್, ಗೂರ್ಖಾ, ಗ್ರೀನ್ ವೇ, ಜೈನ್ ಕೆ ಸಿಖ್ ರೆಜಿಮೆಂಟ್ ಸೇರಿ 10 ಬಟಾಲಿಯನ್ಗಳು ಪಾಕಿಸ್ತಾನದ ಸೇನೆಗೆ ತಕ್ಕ ಉತ್ತರ ನೀಡಿ ಪಾಕಿಸ್ತಾನ ವಶಪಡಿಸಿಕೊಂಡಿದ್ದ ಗಡಿ ಪ್ರದೇಶಗಳನ್ನು ಮರು ಹಿಡಿತಕ್ಕೆ ಪಡೆದವು. ಇದು ಭಾರತೀಯ ಸೇನೆಗೆ ಸಿಕ್ಕ ಮೊದಲ ಜಯವಾಗಿತ್ತು ಎಂದು ಅಂದಿನ ಕ್ಯಾಪ್ಟನ್ ನಾರಾಯಣಸಾ ಸೂರ್ಯವಂಶಿ ಕಾರ್ಗಿಲ್ ಯುದ್ಧದ ಸನ್ನಿವೇಶಗಳನ್ನು ವಿವರಿಸಿದರು.
ನಂತರ ಭಾರತ ಗಡಿಯೊಳಗೆ ನುಗ್ಗಿದ್ದ ಪಾಕಿಸ್ತಾನದ ಸಾವಿರಾರು ಯೋಧರನ್ನು ಹೊರಹಾಕಲು ಸತತ 65 ದಿನಗಳ ಕಾಲ ಸಂಘಟಿತವಾಗಿ ಹೋರಾಟ ನಡೆಸಿದೆವು. ತಾವು ಚೀನಾ ಗಡಿ ಕಾಯುತ್ತಲೇ ಯುದ್ಧದ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದೆವು. ಅವಕಾಶ ದೊರೆತರೆ ಯುದ್ಧ ಭೂಮಿಗೆ ಇಳಿಯಬೇಕೆಂದು ಸಹ ಸಿದ್ಧರಾಗಿದ್ದೆವು. ಆದರೆ ನಮ್ಮ ಯೋಧರು ನಡೆಸಿದ ಗುಂಡು, ಟ್ಯಾಂಕರ್ ದಾಳಿಯಿಂದ ಪಾಕಿಸ್ತಾನದ ಸಾವಿರಾರು ಯೋಧರು ಸಾವನ್ನಪ್ಪಿದ್ದರು. ಯುದ್ಧ ಮಾಡಲು ಆಗುವುದಿಲ್ಲ ಎನ್ನುವ ಪರಿಸ್ಥಿತಿಗೆ ಬಂದ ಮೇಲೆ ಪಾಕಿಸ್ತಾನ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.
ಅಂದಿನ ಯುದ್ಧದಲ್ಲಿ ಭಾರತದ 527ಯೋಧರು ಹುತಾತ್ಮರಾದರು. ಈ ಯೋಧರ ನೆನಪಿಗಾಗಿ ಅಂದಿನ ಕೇಂದ್ರ ಸರ್ಕಾರ ಜುಲೈ 26ಅನ್ನು ಕಾರ್ಗಿಲ್ ವಿಜಯೋತ್ಸವ ದಿನ ಎಂದು ಘೋಷಣೆ ಮಾಡಿತು. ಹುತಾತ್ಮ ಯೋಧರಿಗೆ ಗೌರವ ಹಾಗೂ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಉದ್ದೇಶವೇ ಈ ಕಾರ್ಗಿಲ್ ವಿಜಯೋತ್ಸವದ ಮುಖ್ಯ ಉದ್ದೇಶವಾಗಿದೆ. ಅಂದು ದೇಶಕ್ಕಾಗಿ ಹೋರಾಡಿ ವೀರಮರಣ ಹೊಂದಿದ ಯೋಧರಿಗೆ ನನ್ನ ಸಲಾಂ ಎಂದು ಅವರು ಹೇಳಿದರು.
ಇದನ್ನೂ ಓದಿ: ಸೈನಿಕ ತರಬೇತಿ ಕೇಂದ್ರಕ್ಕೆ ಸೈಕಲ್ ಮೂಲಕ ಕಾರ್ಗಿಲ್‌ಗೆ ತೆರಳಿ ಪವಿತ್ರ ಮಣ್ಣು ತಂದ ಯೋಧ
ಪಾಕಿಸ್ತಾನ ಮತ್ತು ಭಾರತೀಯ ಯೋಧರ ನಡುವೆ ನಡೆದ 65 ದಿನಗಳ ಆಪರೇಷನ್ ವಿಜಯ ಕಾಳಗವನ್ನು ಚೀನಾ ಗಡಿ ಕಾಯುತ್ತಿದ್ದ ವಿಜಯಪುರ ಮೂಲದ ನಿವೃತ್ತ ಯೋಧರೋರ್ವರು ಅಂದಿನ ಯುದ್ಧದ ಸನ್ನಿವೇಶನಗಳನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.