ವಿಜಯಪುರ: ಅಪರಾಧ ಕೃತ್ಯಗಳ ತಡೆಗೆ ನಗರದಾದ್ಯಂತ ಸಿಸಿ ಟಿವಿಗಳನ್ನು ಅಳವಡಿಸಿದ್ದರೂ ಅವುಗಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ. ಖದೀಮರು ತಮ್ಮ ಕೈಚಳ ತೋರಿಸಿ ಕ್ಷಣಾರ್ಧದಲ್ಲಿ ಕೃತ್ಯ ನಡೆಸಿ ಮಾಯವಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ನಿಗಾವಹಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.
ಶಿವಾಜಿ ವೃತ್ತ, ಗಾಂಧಿ ವೃತ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಮಾತ್ರ ಸಿಸಿ ಕ್ಯಾಮೆರಾ ಕಂಡು ಬರುತ್ತಿವೆ. ಉಳಿದ ಕಡೆಗಳಲ್ಲಿ ಅವುಗಳ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ, ದರೋಡೆ, ಕೊಲೆ ಸೇರಿದಂತೆ ಹಲವು ಕೃತ್ಯಗಳು ಸಲೀಸಾಗಿ ನಡೆಯುತ್ತಿವೆ. ಹೀಗಾಗಿ, ಪ್ರತಿ ಬಡಾವಣೆಯಲ್ಲೂ 200 ಮೀಟರ್‌ಗೊಂದು ಕ್ಯಾಮೆರಾ ಅಳವಡಿಸಿದರೆ ಅಪರಾಧ ಕೃತ್ಯ ತಡೆಯಬಹುದು ಎಂದು ಸಾರ್ವಜನಿಕರು ಹೇಳುತ್ತಾರೆ.
ಮಹಾರಾಷ್ಟ್ರದಿಂದ ಗುಮ್ಮಟನಗರಿಗೆ ಹೆದ್ದಾರಿ ಮೂಲಕ ನಿತ್ಯ ಸಾವಿರಾರು ವಾಹನಗಳು ಹಾದು ಹೋಗುತ್ತವೆ. ಹೀಗಾಗಿ, ಅಪರಾಧ ಕೃತ್ಯಗಳ ತಡೆಗೆ ಮಾದಕ ವಸ್ತು ಸಾಗಾಟ ಕಡಿವಾಣಕ್ಕೆ ವಿಜಯಪುರ ನಗರ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ, ವಿಡಿಎ, ಮಹಾನಗರ ಪಾಲಿಕೆಯಿಂದ ವಿವಿಧ ಬಡಾವಣೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಪೊಲೀಸ್ ಇಲಾಖೆಯಿಂದ ಕ್ರಮಕ್ಕೆ ಮುಂದಾಗಿವೆ.
ಹೆಚ್ಚು ಅಪರಾಧ ಕೃತ್ಯಗಳು ನಡೆಯುವ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆಯಿಂದ ಅವು ನಿಯಂತ್ರಣಕ್ಕೆ ಬಂದಿವೆ. ಈಗಾಗಲೇ ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಹೆಚ್ಚೆಚ್ಚು ಅಳವಡಿಸಲು ಮುಂದಾಗುತ್ತೇವೆ ಎಂದು ಎಸ್ಪಿ ಅನುಪಮ್ ಅಗರವಾಲ್ ಹೇಳಿದರು.