ವಿಜಯಪುರ : ಪ್ರತಿ ವರ್ಷ ಜಿಲ್ಲೆಯಲ್ಲಿ 4 ಲಕ್ಷ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತದೆ. ಇದಕ್ಕಾಗಿ ಕೃಷಿ ಇಲಾಖೆ ಈಗಾಗಲೇ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆದಾರರ ಸಭೆ ನಡೆಸಿ, ಎಲ್ಲವನ್ನು ರೈತರಿಗೆ ಸಮರ್ಪಕವಾಗಿ ಪೂರೈಸುವಂತೆ ಸೂಚಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ತಿಳಿಸಿದರು.
ಮುಂಗಾರು ಬೇಗನೆ ಆರಂಭವಾದರೆ ಹೆಸರು ಹಾಗೂ ಉದ್ದನ್ನು ಜಿಲ್ಲೆಯ ಜನತೆ ಬೆಳೆಯುತ್ತಾರೆ. ಮಳೆ ತಡವಾಗಿ ಬಂದರೆ 2 ಲಕ್ಷ 60 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ, 60 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಹಾಗೂ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ ಬೆಳೆಯಲಾಗುತ್ತದೆ. ಈ ಹಿನ್ನೆಲೆ ಇದಕ್ಕೆಲ್ಲ ಅವಶ್ಯಕವಿರುವ ಬಿತ್ತನೆ ಬೀಜ, ಔಷಧಿ ಹಾಗೂ ಗೊಬ್ಬರ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ವಾಡಿಕೆಯಂತೆ ಪ್ರತಿ ವರ್ಷ ಕೂಡಾ 657 ಮಿಲಿಮೀಟರ್ ಮಳೆ ಆಗಬೇಕು. ಆದರೆ, ಕಳೆದ ವರ್ಷ 571 ಎಂಎಂ ಮಳೆಯಾಗಿದೆ. ಆದರೂ ಕೂಡ ರೈತರು ಉತ್ತಮ ಇಳುವರಿ ಪಡೆದಿದ್ದಾರೆ. ಈ ಬಾರಿ ಕೂಡಾ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳಿದ್ದಾರೆ. ಜಿಲ್ಲೆಯಲ್ಲಿ 20 ರೈತ ಸಂಪರ್ಕ ಕೇಂದ್ರಗಳಿದ್ದು, ಅಲ್ಲಿಯೂ ಕೂಡಾ ಬೀಜ, ಗೊಬ್ಬರವನ್ನ ರೈತರು ಪಡೆಯಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಹೇಳಿದರು.
ಈಗಾಗಲೇ ಮಳೆ ಆರಂಭವಾಗಿರುವುದರಿಂದ ರೈತರು ಭೂಮಿಯನ್ನು ಹದಗೊಳಿಸಲು ಮುಂದಾಗಿದ್ದಾರೆ.