ವಿಜಯಪುರ: ಡಾ.ವಿಕ್ರಮ್ ಸಾರಾಬಾಯಿ ಜನ್ಮ ಶತಮಾನೋತ್ಸವ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇಸ್ರೋ ಸಂಸ್ಥೆಯಿಂದ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು.
ನಗರದ ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ಡಾ.ಫ.ಗು ಹಳಕಟ್ಟಿ ತಾಂತ್ರಿಕ ವಿದ್ಯಾಲಯದಲ್ಲಿ 5ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕ್ವಿಜ್ ಕಾರ್ಯಕ್ರಮವನ್ನು ಇಸ್ರೋ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹಮ್ಮಿಕೊಂಡಿದ್ದರು. ವಿಜ್ಞಾನ ವಿಷಯದ ಮಹತ್ವ ಹಾಗೂ ವಿಜ್ಞಾನದ ಕುರಿತ ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸುವ ಉದ್ದೇಶದಿಂದ ಕ್ವಿಜ್ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಇಸ್ರೋ ಸಂಸ್ಥೆ, ಡಾ. ವಿಕ್ರಮ ಸಾರಾಬಾಯಿ, ಉಪಗ್ರಹ ಉಡಾವಣೆ ಕುರಿತಾದ ಪ್ರಶ್ನೆಗಳನ್ನು ಕೇಳಲಾಯಿತು.
ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಇಸ್ರೋ ವಿಜ್ಞಾನ ಸಂಸ್ಥೆಯಿಂದ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿತು.