ಮುದ್ದೇಬಿಹಾಳ (ವಿಜಯಪುರ): ಸಾರಿಗೆ ಮುಷ್ಕರದ ಲಾಭ ಪಡೆದು ಪ್ರಯಾಣಿಕರಿಂದ ಹೆಚ್ಚಿನ ವಸೂಲಿಗೆ ಮುಂದಾದರೆ ಚಾಲನಾ ಪರವಾನಿಗೆ ರದ್ದುಗೊಳಿಸಬೇಕಾಗುತ್ತದೆ ಎಂದು ಖಾಸಗಿ ವಾಹನ ಮಾಲೀಕರಿಗೆ ಮುದ್ದೇಬಿಹಾಳ ಪಿಎಸ್ ಐ ಎಂ.ಬಿ. ಬಿರಾದಾರ ಎಚ್ಚರಿಕೆ ನೀಡಿದ್ದಾರೆ.
ಆರನೇ ವೇತನ ಆಯೋಗ ಜಾರಿಗೆ ಪಟ್ಟು ಹಿಡಿದಿರುವ ಸಾರಿಗೆ ನೌಕರರು ಎರಡನೇ ದಿನವೂ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಿದ್ದಾರೆ. ಹೀಗಾಗಿ, ಮುದ್ದೇಬಿಹಾಳ ಪಟ್ಟಣದ ಕೆಎಸ್‌ಆರ್‌ಟಿಸಿ ಸಾರಿಗೆ ಘಟಕಕ್ಕೆ ಖಾಸಗಿ ವಾಹನ ಮಾಲೀಕರನ್ನು ಕರೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಾರ್ವಜನಿಕರು ದೂರದೂರಿಗೆ ಪ್ರಯಾಣಿಸಲು ಸರ್ಕಾರದ ಸಾರಿಗೆ ನೆಚ್ಚಿಕೊಂಡಿದ್ದರು. ಇದೀಗ ಮುಷ್ಕರ ಇರುವ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳ ಮೊರೆ ಹೋಗುವುದು ಕಂಡುಬರುತ್ತಿದೆ. ವಿಜಯಪುರ, ಬಾಗಲಕೋಟೆ, ಬಸವನ ಬಾಗೇವಾಡಿ, ನಾಲತವಾಡ, ನಾರಾಯಣಪೂರ, ತಾಳಿಕೋಟಿ ಮೊದಲಾದ ಪ್ರಮುಖ ನಗರಗಳಿಗೆ ಹೋಗುವ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಪ್ರಯಾಣಿಕರಿಂದ ಹೆಚ್ಚು ವಸೂಲಿಗೆ ಮುಂದಾದರೆ ಚಾಲನಾ ಪರವಾನಿಗೆ ರದ್ದುಗೊಳಿಸಲಾಗುತ್ತದೆ. ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸದೆ ಸಾರಿಗೆ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಮಾತನಾಡಿ, ಬಸ್ ನಿಲ್ದಾಣದಲ್ಲಿಯೇ ಖಾಸಗಿ ವಾಹನಗಳನ್ನು ನಿಲುಗಡೆ ಮಾಡಬೇಕು. ಜೊತೆಗೆ ಮಾಸ್ಕ್, ಸ್ಯಾಟೈಸರ್ ಬಳಸುವಂತೆ ಸೂಚಿಸಿದರು.