ವಿಜಯಪುರ: ಸೇತುವೆ ದಾಟುವ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ತಂದೆ-ಮಗ ಅದೃಷ್ಟಾವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಸಾತಿಹಾಳ ಗ್ರಾಮದ ಬಳಿಯ ಡೋಣಿ ನದಿಯಲ್ಲಿ ನಡೆದಿದೆ.
ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಡೋಣಿ ನದಿಯ ಮತ್ತೊಂದು ಸೇತುವೆ ಜಲಾವೃತಗೊಂಡಿದ್ದು, ಬೈಕ್ ಸವಾರರು ನದಿ ದಾಟುತ್ತಿದ್ದಾಗ ನೀರಿನ ರಭಸಕ್ಕೆ ಬೈಕ್ ಕೊಚ್ಚಿಕೊಂಡು ಹೋಗುತ್ತಿದ್ದಂತೆ ಅದರಿಂದ ಹಾರಿದ ಇಬ್ಬರು ತಾವು ಜೀವ ಉಳಿಸಿಕೊಳ್ಳುವುದಲ್ಲದೇ ಕೊಚ್ಚಿಕೊಂಡು ಹೋಗುತ್ತಿದ್ದ ಬೈಕ್ನ್ನು ಸಹ ತಡೆದಿದ್ದಾರೆ.
ಮೊದಲು ಇಬ್ಬರು ಸವಾರರು ಬೈಕ್ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ನಂತರ ನದಿಗಿಳಿದು ಬೈಕ್ನ್ನು ಸವಾರರು ಮೇಲಕ್ಕೆತ್ತಿದ್ದಾರೆ. ಸವಾರರನ್ನು ಮಲ್ಲಣ್ಣ ಕುಗಡಿ ಹಾಗೂ ಭೀಮಣ್ಣ ಕುಗಡಿ ಎಂದು ಗುರುತಿಸಲಾಗಿದೆ.
ಆಲಮಟ್ಟಿ ಪಟ್ಟಣದ ಸಾಬೂನು ವ್ಯಾಪಾರಸ್ಥರಾಗಿದ್ದ ಇವರು ಸಾಬೂನು ಮಾರಾಟ ಮಾಡಲು ಹಳ್ಳಿಗಳಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ನದಿಯಿಂದ ಬೈಕ್ ಹೊರ ತೆಗೆದ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ಜಲಾವೃತವಾದ ಸೇತುವೆ ಮೇಲೆ ಜೀವ ಭಯ ಬಿಟ್ಟು ಸಂಚಾರ ಮಾಡುತ್ತಿರುವ ಜನರು, ಬೈಕ್ಗಳು ಹಾಗೂ ಇತರೆ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಿದ್ದು ಅಪಾಯವನ್ನು ಅವರೇ ಆಹ್ವಾನಿಸುತ್ತಿದ್ದಾರೆ. ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.