ಮುದ್ದೇಬಿಹಾಳ(ವಿಜಯಪುರ): ನಿಷೇಧಿತ ಕೀಟನಾಶಕ ಹಾಗೂ ರಸಗೊಬ್ಬರ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಬೆಳಗಾವಿ ಜಾಗೃತ ದಳದ ಅಧಿಕಾರಿಗಳು, ವಿಜಯಪುರ ಕೃಷಿ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಿ 40 ಸಾವಿರ ರೂ. ಮೌಲ್ಯದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಶ್ರೀ ವೀರೇಶ್ವರ ಕೃಷಿ ಕೇಂದ್ರ ಹಾಗೂ ಕೃಷಿ ಇಲಾಖೆ ಸಮೀಪದಲ್ಲಿರುವ ಶ್ರೀಗೊಡಚಿ ವೀರಭದ್ರೇಶ್ವರ ಅಗ್ರೋ ಸೇಲ್ಸ್ ಹಾಗೂ ತಾಳಿಕೋಟಿಯ ಭೋಗೇಶ್ವರ ಕೃಷಿ ಕೇಂದ್ರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಗಾವಿ ಜಾಗೃತ ದಳ ತಂಡದ ಮುಖ್ಯಸ್ಥ ಜಿಲಾನಿ ಮೊಕಾಶಿ, ವಿಜಯಪುರ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಿ.ಡಬ್ಲ್ಯೂ ರಾಜಶೇಖರ ನೇತೃತ್ವದಲ್ಲಿ ದಾಳಿ ನಡೆಸಿ ಅನುಮತಿ ರಹಿತ ನೈಟ್ರೋಬೆಂಜಿನ್ ಹಾಗೂ ಎಪಿಎಂಸಿಯ ಗೋಡೌನ್ನಲ್ಲಿ ಸಂಗ್ರಹಿಸಿಟ್ಟಿದ್ದ ರಸಗೊಬ್ಬರ, ಬೀಜ, ಕೀಟನಾಶಕ ಇರುವುದನ್ನು ಪತ್ತೆ ಹಚ್ಚಿದ್ದಾರೆ.
ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಅಕ್ರಮ ನಡೆಸಿರುವ ಅಂಗಡಿ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.