ವಿಜಯಪುರ: ಪೌರತ್ವ ಕಾಯ್ದೆ ಜಾರಿ ಬೆನ್ನಲ್ಲೇ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಡಿ.21ರವರಿಗೂ 144 ಸೆಕ್ಷನ್ ಜಾರಿ ಮಾಡಿದ್ದರೂ, ಪ್ರಗತಿ ಪರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಎಸ್ಪಿ ಪ್ರಕಾಶ ನಿಕ್ಕಂ ಅವರಿಗೆ ಕಾಯ್ದೆ ವಿರುದ್ಧ ಮನವಿ ಸಲ್ಲಿಸಿದ್ದಾರೆ.
ಇನ್ನೂ 144 ಕಲಂ ಜಾರಿಯ ಬೆನ್ನಲ್ಲೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ನೇತೃತ್ವದಲ್ಲಿ ವಿಜಯಪುರ ನಗರದ ಪ್ರಮುಖ ಸ್ಥಳಗಳಲ್ಲಿ ಹಾಗೂ ಅಂಬೇಡ್ಕರ್ ವೃತ್ತ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಯಿತು. ಇಂದು ಕೂಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರಗತಿ ಪರ ಸಂಘಟನೆಗಳು ಒಟ್ಟಿಗೆ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದವು.
ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ 3 ಕೆಎಸ್‌ಆರ್‌ಪಿ ತುಕಡಿ ಹಾಗೂ 10 ಡಿಎಆರ್ ತುಕಡಿಗಳು ಸೇರಿ ಒಟ್ಟು 700 ಜನ ಪೋಲಿಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.