ಮುದ್ದೇಬಿಹಾಳ: ಪಟ್ಟಣದ ವಸತಿ ಶಾಲೆಯೊಂದರ ಶೌಚಾಲಯದಿಂದ ಕೊಳಚೆ ನೀರು ಹರಿದು ಬರುತ್ತಿದ್ದು, ವಿದ್ಯಾನಗರದಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಹಿಂಭಾಗದ ನಿವಾಸಿಗಳು ನರಕಯಾತನೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಣಚಗಲ್‌ನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶೌಚಾಲಯದಿಂದ ಕೊಳಚೆ ನೀರು ಹರಿದು ಬರುತ್ತಿದೆ. ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಅವರು ಇದೇ ಶಾಲೆಯ ಸಮೀಪದಲ್ಲೇ ವಾಸಿಸುತ್ತಿದ್ದಾರೆ. ಜೊತೆಗೆ ಶಾಸಕರ ನಿವಾಸವೂ ಕೂಡ ಶಾಲೆಗೆ ಕೂಗಳತೆ ದೂರದಲ್ಲಿದ್ದು, ವಾರ್ಡ್ ಸದಸ್ಯೆ ಸಹನಾ ಬಡಿಗೇರ ಅವರ ಮುಖವನ್ನೇ ನಾವು ಇದುವರೆಗೂ ನೋಡಿಲ್ಲ. ಸಮಸ್ಯೆಯ ಕುರಿತು ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ವಾರ್ಡ್ ನಿವಾಸಿಗಳು ಆರೋಪಿಸಿದ್ದಾರೆ.
ಶಾಲೆಯಲ್ಲಿ ಮಕ್ಕಳ ಸ್ನಾನದ ನೀರು, ಬಟ್ಟೆ ತೊಳೆದ ಮಲೀನ ನೀರು ಹಾಗೂ ಶೌಚಾಲಯದ ಕೊಳಚೆ ನೀರನ್ನು ವ್ಯವಸ್ಥಿತವಾಗಿ ಪೈಪ್‌ಲೈನ್ ಮಾಡಿ ವಿಲೇವಾರಿ ಮಾಡದ ಹಿನ್ನೆಲೆ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಕ್ಕಳು, ವೃದ್ಧರು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತಿದ್ದು, ಪ್ರತಿನಿತ್ಯ ಆಸ್ಪತ್ರೆಗೆ ಅಲೆದಾಡುವಂತಾಗಿದೆ ಎಂದು ವಾರ್ಡ್ನ ಮಹಿಳೆಯರು ದೂರಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳಾದ ಶಿವಬಾಯಿ ಪಾಟೀಲ, ಜ್ಯೋತಿ ನಾಗಾವಿ, ಮಹಾದೇವಿ ಹಂದ್ರಾಳ, ರೇವತಿ ಹೊಳಿ, ಸುಜಾತಾ ಬಿರಾದಾರ, ಗುರುಬಾಯಿ ಪಾಟೀಲ, ಸರೋಜಾ ಒಣರೊಟ್ಟಿ, ಮುದ್ದಮ್ಮ ಪಾಟೀಲ ಮೊದಲಾದವರು ಒತ್ತಾಯಿಸಿದರು.