ಮುದ್ದೇಬಿಹಾಳ : ಸಾರಿಗೆ ಸಂಸ್ಥೆಗಳ ಮುಷ್ಕರದ ಲಾಭ ಪಡೆಯೋದಕ್ಕೆ ಖಾಸಗಿ ಸಾರಿಗೆ ಮಾಲೀಕರು ಮುಂದಾಗಿದ್ದಾರೆ. ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆ ಸಾರ್ವಜನಿಕರು ಇಂದು ಬೆಳಗ್ಗೆ ಪಟ್ಟಣದ ಬಸ್ ನಿಲ್ದಾಣದ ಎದುರಿಗಿದ್ದ ಟ್ರ್ಯಾಕ್ಟರ್, ಗೂಡ್ಸ್, ಟಂಟಂ ವಾಹನಗಳ ಮೊರೆ ಹೋಗಬೇಕಾಯಿತು.
ಮುದ್ದೇಬಿಹಾಳದಿಂದ ವಿಜಯಪುರಕ್ಕೆ ತೆರಳಲು 200 ರೂ. ದರ ನಿಗದಿಪಡಿಸಿದ್ರೆ, ಬಸವನ ಬಾಗೇವಾಡಿಗೆ 80-100 ರೂ.ಗಳನ್ನು ನಿಗದಿಪಡಿಸಿದ್ದರು. ಕಾರಣ ಕೇಳಿದ್ರೆ ಹೋಗುವಾಗ ಮಾತ್ರ ಪ್ರಯಾಣಿಕರು ಸಿಗುತ್ತಾರೆ. ಬರುವಾಗ ಖಾಲಿಯಾಗಿ ಬರಬೇಕಾಗುತ್ತದೆ. ಹಾಗಾಗಿ ಎರಡೂ ಮಾರ್ಗದಲ್ಲಿ ಅನ್ವಯಿಸುವ ದರ ನಿಗದಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕರೆ ಮಾಡಿದ್ರೂ ಸೇವೆಗೆ ಬಾರದ ನೌಕರರು : ಸಾರಿಗೆ ಘಟಕದಲ್ಲಿ ಸೇವೆಗೆ ಬರುವಂತೆ ಕರೆ ಮಾಡಿ ಕರೆಯುತ್ತಿದ್ದರೂ ನೌಕರರು ಮಾತ್ರ ಸೇವೆಗೆ ಹಾಜರಾಗುತ್ತಿಲ್ಲ. ಇದರಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರ ಪರದಾಟ ಮುಂದುವರೆದಿದೆ.
ಪೊಲೀಸ್ ಭದ್ರತೆ ಕೊಟ್ಟರೂ ಆರಂಭವಾಗಿಲ್ಲ ಬಸ್ : ಪೊಲೀಸ್ ಭದ್ರತೆ ಕೊಡುವುದಾಗಿ ಹೇಳುತ್ತಿದ್ದರೂ ನೌಕರರು ಮಾತ್ರ ಸೇವೆಗೆ ಬರುವ ಧೈರ್ಯ ಮಾಡುತ್ತಿಲ್ಲ. ಸಿಪಿಐ ಆನಂದ ವಾಘಮೋಡೆ, ಕ್ರೈಂ ಪಿಎಸ್ಐ ಟಿ ಜೆ ನೆಲವಾಸಿ ಬೆಳಗ್ಗೆಯೇ ಬಸ್ ನಿಲ್ದಾಣಕ್ಕೆ ಬಂದು ಬಸ್ ಬಿಡುವುದಾದ್ರೆ ಭದ್ರತೆ ನೀಡುವುದಾಗಿ ಹೇಳಿದ್ದರೂ ಚಾಲಕರು, ನಿರ್ವಾಹಕರು ನಿಲ್ದಾಣದತ್ತ ಸುಳಿಯಲಿಲ್ಲ. ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ ಕೂಡ ಬಸ್ ಬಿಡಲು ಸಿದ್ಧರಿದ್ದು, ನೌಕರರು ಸೇವೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು.