ವಿಜಯಪುರ : ಆಧುನಿಕ ಜೀವನ ಶೈಲಿ, ಸತ್ವವಿಲ್ಲದ ಆಹಾರ ಪದ್ದತಿಯಿಂದ ಹಲವು ತೊಂದರೆಗಳು ಜನರನ್ನು ಕಾಡುತ್ತಿವೆ. ಅದರಲ್ಲಿಯೂ ಗರ್ಭಿಣಿಯರು ಹೆಚ್ಚಾಗಿ ಸಮಸ್ಯೆ ಎದುರಿಸುವಂತಾಗಿದೆ.
ಹೆರಿಗೆ ನೋವು ತಾಳದೆ ಗರ್ಭಿಣಿಯರು ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ಮೊರೆ ಹೋಗುತ್ತಿದ್ದಾರೆ. ಸ್ವತಃ ಗರ್ಭಿಣಿಯರೇ ಸಹಜ ಹೆರಿಗೆ ಬೇಡ, ನಮಗೆ ಸಿಸೇರಿಯನ್ ಮಾಡಿ ಎನ್ನುವ ಬೇಡಿಕೆ ಹೆಚ್ಚಾಗಿದೆ.
ಹಿಂದೆ ಮನೆಯಲ್ಲಿಯೇ ಹೆಚ್ಚಾಗಿ ಹೆರಿಗೆ ಮಾಡಿಸಲಾಗುತ್ತಿತ್ತು. ಮನೆಯ ಹಿರಿಯ ಮಹಿಳೆ ಸಹಜ ಹೆರಿಗೆ ಮಾಡಿಸುವ ಪದ್ದತಿಯೂ ಇತ್ತು. ಅಂದು ಗರ್ಭಿಣಿಯರು ಹೆರಿಗೆ ಆದ ಮರು ದಿನವೇ ಕೆಲಸದಲ್ಲಿ ತೊಡಗುತ್ತಿದ್ದರು. ಈಗ ಕಾಲ ಬದಲಾಗಿದೆ.
ಬಹುತೇಕ ಮಹಿಳೆಯರು ಹೆರಿಗೆ ನೋವು ತಡೆದುಕೊಳ್ಳಲಾಗದೆ ಸಿಸೇರಿಯನ್ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಇಂದಿನ ಸತ್ವ ರಹಿತ ಆಹಾರ ಪದ್ದತಿ ಹಾಗೂ ಕೆಲ ತಪ್ಪು ತಿಳುವಳಿಕೆ. ಸೌಂದರ್ಯ ಹಾಳಾಗುವ ಭಯದಿಂದ ಗರ್ಭಿಣಿಯರು ಸಿಸೇರಿಯನ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಇದರ ಲಾಭ ಪಡೆದಿರುವ ಕೆಲ ಖಾಸಗಿ ಆಸ್ಪತ್ರೆಗಳು ಸಹಜ ಹೆರಿಗೆಗೆ ಅವಕಾಶವಿದ್ದರೂ ಹಣಕ್ಕಾಗಿ ಸಿಸೇರಿಯನ್ ಮಾಡಿಸುತ್ತಿದ್ದಾರೆ. ಕೇವಲ ಖಾಸಗಿ ಆಸ್ಪತ್ರೆಗಷ್ಟೇ ಅಲ್ಲ, ಸರ್ಕಾರಿ ಹೆರಿಗೆ ಆಸ್ಪತ್ರೆಗೂ ದಾಖಲಾಗುವ ಗರ್ಭಿಣಿಯರ ಬೇಡಿಕೆ ಸಹ ಸಿಸೇರಿಯನ್ ಆಗಿದೆ.
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿಯೂ ಪ್ರತಿ ತಿಂಗಳು 600-700 ಹೆರಿಗೆ ಆಗುತ್ತಿವೆ. ಅದರಲ್ಲಿ 350-370ರಷ್ಟು ಗರ್ಭಿಣಿಯರು ಸಿಸೇರಿಯನ್ ಮೂಲಕವೇ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಸಹಜ ಹೆರಿಗೆಯ ಮಹತ್ವ, ಅವಶ್ಯಕತೆ ಬಗ್ಗೆ ಎಷ್ಟೇ ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ಅವರು ಇರುವುದಿಲ್ಲ ಎನ್ನುತ್ತಾರೆ ಶುಶ್ರೂಷಕಿ ಶೀಲಾವತಿ.
ಆಧುನಿಕ ಜೀವನ ಶೈಲಿ, ಆಹಾರ ಪದ್ದತಿ, ತಪ್ಪು ತಿಳುವಳಿಕೆ ಹಾಗೂ ಕೆಲ ಖಾಸಗಿ ಆಸ್ಪತ್ರೆಯ ಧನ ದಾಹದಿಂದ ಸಹಜ ಹೆರಿಗೆ ಪದ್ದತಿ ದೇಶದಲ್ಲಿ ಕಡಿಮೆಯಾಗುತ್ತಿದೆ. ಸರ್ಕಾರಗಳು ಸಹ ವೈದ್ಯಕೀಯ ವಿಚಾರವಾಗಿ ಸಾಕಷ್ಟು ಯೋಜನೆ ರೂಪಿಸುತ್ತಿವೆ. ಜತೆಗೆ ಸಹಜ ಹೆರಿಗೆ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ.