ವಿಜಯಪುರ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ರಾಜ್ಯಾದ್ಯಂತ ಪಕ್ಷದ ಅನೇಕ ಯುವ ಮುಖಂಡರು ರಾಜೀನಾಮೆ ನೀಡುತ್ತಿದ್ದಾರೆ. ಈ ರಾಜೀನಾಮೆ ಪರ್ವ ಮುಂದುವರಿದಿದ್ದು, ವಿಜಯಪುರ ಜಿಲ್ಲಾ ಸಾಮಾಜಿಕ ಜಾಲತಾಣ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸಂದೀಪ ಪಾಟೀಲ್ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣ ಸಮಿತಿಯ 9 ಮಂಡಲಗಳ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಬಿಜೆಪಿ ಕೇವಲ ರಾಜಕೀಯ ಪಕ್ಷವಲ್ಲ, ಈ ಪಕ್ಷಕ್ಕೆ ತನ್ನದೇ ಆದಂತಹ ಇತಿಹಾಸವಿದೆ. ವಿಚಾರ ಸಿದ್ಧಾಂತಗಳಿಗಾಗಿ ಅನೇಕ ಕಾರ್ಯಕರ್ತರ ಬಲಿದಾನ ನಡೆದಿರುವಂತಹದ್ದು ಇತಿಹಾಸವಾದ್ರೆ, ಇಂದಿನ ಕಾಲಘಟ್ಟದಲ್ಲೂ ಕೂಡ ಸೈದ್ಧಾಂತಿಕ ವಿಚಾರಧಾರೆಗೆ ಹೋರಾಡುವಂತಹ ದುರ್ಗತಿ ಬಂದೊದಗಿರುವುದು ಕಾರ್ಯಕರ್ತರಿಗೆ ನೋವಾಗುತ್ತದೆ. ಹಿಂದೆಲ್ಲ ನಡೆದಂತಹ ಕೊಲೆಗಳಿಗೆ ಯಾವ ರೀತಿಯಲ್ಲಿ ನ್ಯಾಯ ಸಿಕ್ಕಿದೆ ಎನ್ನುವುದು ನಮ್ಮ ಕಣ್ಣ ಮುಂದಿದೆ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಆದ್ರೆ, ಪದಾಧಿಕಾರಿಗಳು ಸಲ್ಲಿಸಿರುವ ರಾಜಿನಾಮೆಗಳನ್ನು ಜಿಲ್ಲಾಧ್ಯಕ್ಷರು ಇನ್ನೂ ಅಂಗೀಕಾರ ಮಾಡಿಲ್ಲ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬಿಜೆಪಿಯ ಮೂವರು ಕಾರ್ಯಕರ್ತರ ರಾಜೀನಾಮೆ