ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಎಲ್ ಟಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕಳಪೆ ಮಟ್ಟದ ಆಹಾರ ಪೂರೈಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಎಸ್‌ಪಿಸಿ ಎಂಬ ಕಂಪನಿಯಿಂದ ಆಹಾರ ಪೂರೈಕೆಯಾಗಿತ್ತು. ಗುತ್ತಿಗೆದಾರರು ಕಳಪೆ ಮಟ್ಟದ ತೊಗರಿ ಪೂರೈಕೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆ ಅಂಗನವಾಡಿ ಕೇಂದ್ರ ಬಂದಾಗಿದ್ರೂ ಸಹ ಮಕ್ಕಳು, ತಾಯಿಂದಿರಿಗೆ ಅಂಗವಾಡಿಯಿಂದ ಆಹಾರ ಪದಾರ್ಥ ಪೂರೈಕೆ ಮಾಡಲಾಗಿತ್ತು.
ಈ ವೇಳೆ ಗ್ರಾಮಸ್ಥರು ಆಹಾರ ಪದಾರ್ಥದ ಗುಣಮಟ್ಟ ಪರಿಶೀಲಿಸಿದಾಗ ಕಳಪೆ ಇರುವ ವಿಷಯ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸುಭಾಷ್ ಆಲಗೂರ ತಿಳಿಸಿದ್ದಾರೆ.