ವಿಜಯಪುರ: ನಿವೃತ್ತ ಕೆಎಎಸ್ ಅಧಿಕಾರಿ ಕೆ. ಶಿವರಾಂ ನಟಿಸಿರುವ 'ಬಾನಲ್ಲೆ ಮಧುಚಂದ್ರಕೆ' ಸಿನಿಮಾ ನೋಡಿದ್ದರೆ, ಅದರಲ್ಲಿ ಮೋಸ ಮಾಡಿದ ಪ್ರೇಯಸಿಯನ್ನು ಹನಿಮೂನ್ ನೆಪದಲ್ಲಿ ಕಾಶ್ಮೀರಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡುತ್ತಾನೆ.
ಆದರೆ, ಇದೇ ರೀತಿಯ ಸಿನಿಮೀಯ ನೈಜ ಘಟನೆಯೊಂದು ಬರೋಬ್ಬರಿ 10 ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. ಬಸವನಾಡಿನಲ್ಲಿ 10 ವರ್ಷಗಳ ಹಿಂದೆ ನಡೆದಿದ್ದ ಹತ್ಯೆ ಪ್ರಕರಣ ಇದೀಗ ಬಹಿರಂಗಗೊಂಡಿದೆ. ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಏನಿದು ಘಟನೆ?: ವಿಜಯಪುರ ನಗರದ ಬಸವರಾಜ ಮಮದಾಪುರ ಇವರ ಪುತ್ರಿ ಪ್ರಿಯಾಂಕಾ ಎಂಬುವರನ್ನು ತಮ್ಮ ಸಂಬಂಧಿಕರೇ ಆದ ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ಹುಚ್ಚಪ್ಪಗೌಡ ಪಾಟೀಲ ಎಂಬವರೊಂದಿಗೆ 2008 ರಲ್ಲಿ ವಿವಾಹ ಮಾಡಿಕೊಡಲಾಗಿತ್ತು.
ಮದುವೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರದ ದಿನಗಳಲ್ಲಿ ಇಬ್ಬರಲ್ಲಿಯೂ ಮನಸ್ತಾಪ ಉಂಟಾಗಿ ಪದೇ ಪದೆ ತವರು ಮನೆಗೆ ಪ್ರಿಯಾಂಕಾ ಬರುತ್ತಿದ್ದರು. ಇತ್ತ ಕಡೆ ಪೋಷಕರು ಅವಳ ಮನವೊಲಿಸಿ ಗಂಡನ ಮನೆಗೆ ಬಿಟ್ಟು ಬರುತ್ತಿದ್ದರು. 2011ರ ವರೆಗೂ ಹೀಗೆಯೇ ಮುಂದುವರೆದಿತ್ತು.
ಒಂದು ದಿನ ಪ್ರಿಯಾಂಕಾ ತಮಗೆ ಗಂಡನ ಜೊತೆಗೆ ಸಂಸಾರ ಮಾಡಲು ಇಷ್ಟವಿಲ್ಲ, ತಾವು ಇನ್ನೊಬ್ಬರನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ನಿನಗೆ ಮದುವೆಯಾಗಿದ್ದು, ಈ ರೀತಿಯಾಗಿ ಮಾಡುವುದು ಸರಿಯಲ್ಲ ಎಂದು ಪೋಷಕರು ಬುದ್ಧಿವಾದ ಹೇಳಿ, ಮತ್ತೆ ಗಂಡನ ಮನೆಗೆ ಬಿಟ್ಟು ಬಂದಿದ್ದಾರೆ.
ಓಡಿಹೋಗಿದ್ದಾಳೆಂದು ಸುಮ್ಮನಾಗಿದ್ದ ಪೋಷಕರು: ಈ ಪ್ರೀತಿ ವಿಚಾರ ಗಂಡನ ಮನೆಯವರಿಗೆ ಗೊತ್ತಾಗಿ ಖತರ್ನಾಕ್ ಐಡಿಯಾ ಮಾಡಿದ್ದಾರೆ. ಈ ಮಧ್ಯೆ ಪ್ರಿಯಾಂಕಾ ಅಂಗಡಿಗೆ ಹೋದವಳು ವಾಪಸ್ ಮನೆಗೆ ಬಂದಿಲ್ಲ ಎಂದು ಪ್ರಿಯಾಂಕಾ ಪೋಷಕರಿಗೆ ಗಂಡನ ಮನೆಯವರು ಕರೆಮಾಡಿ ಹೇಳಿದ್ದಾರೆ. ಬಹುಶಃ ಆಕೆ ಪ್ರಿಯಕರನ ಜತೆ ಓಡಿ ಹೋಗಿರಬಹುದು ಎಂದು ಅವರು ಸುಮ್ಮನಾಗಿದ್ದಾರೆ.
ಬಾರ್ನಲ್ಲಿ ಬಾಯ್ಬಿಟ್ಟ ಆರೋಪಿ: ಪ್ರಿಯಾಂಕಾ ಪಾಟೀಲ ಸುಮಾರು 10 ವರ್ಷಗಳ ಕಾಲ ನಾಪತ್ತೆಯಾಗಿದ್ದಾರೆ ಅಂತಲೇ ಬಿಂಬಿಸಲಾಗಿತ್ತು. ಒಂದು ದಿನ ಪ್ರಿಯಾಂಕಾ ಪತಿ ಹುಚ್ಚಪ್ಪಗೌಡ ಬಾರ್ನಲ್ಲಿ ಕುಳಿತು ಕುಡಿಯುವಾಗ ತನ್ನ ಪತ್ನಿಯನ್ನು ಕೊಂದಿರುವುದಾಗಿ ಮಾತನಾಡಿಕೊಂಡಿದ್ದಾನೆ. ಈ ವಿಷಯ ಪೊಲೀಸರ ಕಿವಿಗೆ ಬಿದ್ದಿದೆ.
ತಕ್ಷಣ ಅಲರ್ಟ್ ಆದ ಪೊಲೀಸರು ಹುಚ್ಚಪ್ಪಗೌಡನ ಪತ್ನಿ ಪ್ರಿಯಾಂಕಾ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆಕೆ ಹತ್ತು ವರ್ಷದ ಹಿಂದೆ ನಾಪತ್ತೆ ಆಗಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸರು ಪ್ರಿಯಾಂಕಾ ಪೋಷಕರನ್ನು ವಿಚಾರಣೆ ನಡೆಸಿ ಅವರಿಂದ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಮಗಳು ಕಾಣೆಯಾದ ಬಗ್ಗೆ 2021ರ ಜೂನ್ 1ರಂದು ದೂರು ನೀಡಿದ್ದಾರೆ. ವಿಚಾರಣೆ ಆರಂಭಿಸಿದ ಪೊಲೀಸರು ಪ್ರಿಯಾಂಕಾ ಯಾರನ್ನು ಪ್ರೀತಿಸುತ್ತಿದ್ದಳು ಎನ್ನುವ ಬಗ್ಗೆ ತನಿಖೆ ನಡೆಸಿದಾಗ ಶ್ರೀಧರ ಎಂಬ ಯುವಕನ ಹೆಸರು ಕೇಳಿ ಬಂದಿದೆ.
ಆತನನ್ನು ಹುಡುಕಲು ಹೋದಾಗ ಆತನೂ ಸಹ 10 ವರ್ಷಗಳಿಂದ ನಾಪತ್ತೆಯಾಗಿರುವುದು ಗೊತ್ತಾಗಿದೆ. ಪ್ರಿಯಾಂಕಾ ಪತಿ ಹುಚ್ಚಪ್ಪಗೌಡ ಹಾಗೂ ಅವರ ಸಹೋದರ ಸಿದ್ದಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮರ್ಡರ್ ಮಿಸ್ಟರಿ ಹೊರ ಬಂದಿದೆ.
ಇದೆಲ್ಲಾ ಹೇಗಾಯ್ತು? : ಬಾರ್ನಲ್ಲಿ ವಿಷಯ ಬಾಯ್ಬಿಟ್ಟಿದ್ದ ಹುಚ್ಚಪ್ಪಗೌಡ ಪೊಲೀಸರ ಎದುರು ತಾವು ಮಾಡಿದ್ದ ಕೊಲೆ ರಹಸ್ಯವನ್ನು ಎಳೆ ಎಳೆಯಾಗಿ ಹೇಳಿದಾಗ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ತನ್ನ ಪತ್ನಿ ಬೇರೆಯವರ ಜತೆ ಅನೈತಿಕ ಸಂಬಂಧ ಹೊಂದಿರುವುದನ್ನು ಸಹಿಸದ ಹುಚ್ಚಪ್ಪಗೌಡ ತನ್ನ ಸಹೋದರ ಸಿದ್ದಪ್ಪನ ಜತೆ ಸೇರಿಕೊಂಡು ಪ್ರಿಯಾಂಕಾಳನ್ನು ದೇವರ ದರ್ಶನಕ್ಕೆ ಶ್ರೀಶೈಲಗೆ ಹೋಗೋಣ ಎಂದು ಪುಸಲಾಯಿಸಿ 24 ಜುಲೈ 2011ರಂದು ಬಾಡಿಗೆ ಕಾರು ಮಾಡಿಕೊಂಡು ಹೋಗುತ್ತಾರೆ.
ದೇವರ ದರ್ಶನ ಪಡೆದು ವಾಪಸ್ ಬರುವಾಗ ಅಂದರೆ 25 ಜುಲೈ 2011ರಂದು ಆಂಧ್ರಪ್ರದೇಶದ ಕೊರಪುರ ಫಾರೆಸ್ಟ್ ಚೆಕ್ ಪೋಸ್ಟ್ ಬಳಿಯ ಮಂತನಾಲಮ್ ಹಳ್ಳಿಯ ಸೇತುವೆ ಬಳಿ ಪ್ರಿಯಾಂಕಾಳ ಕುತ್ತಿಗೆಗೆ ನೈಲಾನ್ ಪ್ಲಾಸ್ಟಿಕ್ ಹಗ್ಗದಿಂದ ಬಿಗಿದು ಕೊಲೆ ಮಾಡಿ, ದಟ್ಟವಾದ ಕಾಡಿನ ಸೇತುವೆ ಕೆಳಗೆ ವಿವಸ್ತ್ರಗೊಳಿಸಿ ಎಸೆದು ಹೋಗಿದ್ದಾರೆ. ಅವಳ ಮೈಮೇಲಿನ ಬಟ್ಟೆಯನ್ನು ನಾರಾಯಣಪುರ ಡ್ಯಾಂನನಲ್ಲಿ ಎಸೆದಿದ್ದಾರೆ.
7 ಜುಲೈ 2022 ರಂದು ಕಾರು ಚಾಲಕ ಸೇರಿದಂತೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರ ವಿರುದ್ಧ 120ಬಿ, 302, 201, 506, 34 ಐಪಿಸಿ ಸೆಕ್ಷನ್ ಗಳನ್ನು ಹಾಕಿ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಸುಮಾರು 10 ವರ್ಷಗಳ ಹಿಂದೆ ನಡೆದಿರುವ ಒಂದು ಭಯಾನಕ, ಸಿನಿಮೀಯ ರೀತಿಯ ಕೊಲೆ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಮರ್ಯಾದೆಗೆ ಹೆದರಿ ದೂರು ಕೊಡಲು ಹಿಂಜರಿದಿದ್ದ ಪ್ರಿಯಾಂಕಾಳ ಪೋಷಕರು ಮಗಳನ್ನು ಕಳೆದುಕೊಂಡು ಶಾಕ್ಗೆ ಒಳಗಾಗಿದ್ದಾರೆ.
ಸದ್ಯ ಆಕೆಯ ಪ್ರಿಯಕರ ಶ್ರೀಧರನನ್ನು ಹುಡುಕಾಡುತ್ತಿರುವ ಪೊಲೀಸರು, ಆತನಿಗೆ ಏನಾದರೂ ಸಮಸ್ಯೆ ಆಗಿದೆಯಾ? ಅವನು ಎಲ್ಲಿದ್ದಾನೆ ಅನ್ನೋದರ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ನೀರುಪಾಲಾಗಿದ್ದ ಯುವಕನ ಶವ ಪತ್ತೆ