ವಿಜಯಪುರ: ಕೆಲವೊಂದು ನಿಬಂಧನೆಗಳನ್ನು ವಿಧಿಸಿ ರಾಜ್ಯಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿದೆ. ಸೋಮವಾರದಿಂದ ಶನಿವಾರದವರೆಗೂ ಲಾಕ್ಡೌನ್ ಸಡಿಲಿಕೆ ಇದ್ದು ಭಾನುವಾರ ಎಲ್ಲಾ ಕಡೆ ಲಾಕ್ಡೌನ್ ಇರಲಿದೆ.
ನಾಳೆ ಭಾನುವಾರವಾಗಿದ್ದು ಲಾಕ್ಡೌನ್ ಇರುವುದರಿಂದ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಇಂದು ಗುಂಪಾಗಿ ರಸ್ತೆಗೆ ಇಳಿದಿದ್ದಾರೆ. ಸಾಮಾಜಿಕ ಅಂತರವೂ ಇಲ್ಲದೆ ದಿನಬಳಕೆ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ನಾಳೆ ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ಗುಮ್ಮಟನಗರಿ ಸಂಪೂರ್ಣವಾಗಿ ಸ್ತಬ್ಧವಾಗಲಿದೆ. ನಾಳೆ ಜಿಲ್ಲಾದ್ಯಂತ ಯಾವುದೇ ಸಾರಿಗೆ ಕೂಡಾ ಇರುವುದಿಲ್ಲ.
ನಾಳೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಈಗಾಗಲೇ ಸೂಚಿಸಿದೆ. ಮೆಡಿಕಲ್, ಆಸ್ಪತ್ರೆ, ಹಾಲು ಸೇರಿದಂತೆ ತುರ್ತು ಸೇವೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಸೇವೆಗಳು ಬಂದ್ ಆಗಲಿದೆ. ಆದ್ದರಿಂದ ಜನರು ಸುಡುಬಿಸಿಲಿನಲ್ಲೇ ಇಂದು ಅಗತ್ಯವಸ್ತುಗಳನ್ನು ಕೊಂಡೊಯ್ಯಲು ಮುಗಿಬಿದ್ದಿದ್ದಾರೆ. ಇನ್ನು ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.