ವಿಜಯಪುರ: ವಯಸ್ಸು ನಲ್ವತ್ತಾಯ್ತು ಅಂದ್ರೆ ಸಾಕು ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮಂಡಿ ನೋವು ಸೇರಿದಂತೆ ಹತ್ತು ಹಲವು ಕಾಯಿಲೆಗಳು ಬಂದು ಮನುಷ್ಯ ಔಷಧಿ ಮೇಲೆ ಜೀವನ ನಡೆಸುವ ಕಾಲ ಬಂದಿದೆ. ಆದರೆ ವಿಜಯಪುರದ ಹುಡ್ಕೋ ಕಾಲೋನಿಯಲ್ಲಿರುವ ಬುದ್ಧ ವಿಹಾರದಲ್ಲಿ ಎಲ್ಲ ವಯೋವರ್ಗದವರ ಆರೋಗ್ಯ ಕಾಪಾಡಲು ವ್ಯಾಯಾಮ ಶಾಲೆಯೊಂದು ಶುರುವಾಗಿದೆ
ವ್ಯಾಯಾಮ ಮಾಡಲು ಇಲ್ಲಿ ವಯಸ್ಸಿನ ಮಿತಿ ಇಲ್ಲ. ಅನಾರೋಗ್ಯದಿಂದ ಜೀವನವೇ ಬೇಡ ಎನ್ನುವ ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಜಿಮ್ಗೆ ಬರುತ್ತಿದ್ದಾರೆ. ಸಹಜ, ಸರಳ ಹಾಗೂ ಸುಲಭ ವ್ಯಾಯಾಮ, ಅಭ್ಯಾಸಗಳ ಮೂಲಕ ಆರೋಗ್ಯದ ಜತೆ ಸದಾ ಲವಲವಿಕೆಯಲ್ಲಿ ಹೇಗೆ ಇರಬೇಕು ಎನ್ನುವುದನ್ನು ಇಲ್ಲಿ ಕಲಿಸಲಾಗುತ್ತಿದೆ.
ಬೆಳಗ್ಗೆ 1 ಗಂಟೆಗಳ ಕಾಲ ನಡೆಯುವ ವ್ಯಾಯಾಮ ತರಗತಿಯಲ್ಲಿ ಪಾಲ್ಗೊಂಡು ದೇಹವನ್ನು ಒಂದಷ್ಟು ದಣಿಸಿ, ಮನಸ್ಸನ್ನು ಉಲ್ಲಾಸಗೊಳಿಸಿ ಸಾಕಷ್ಟು ವೃದ್ಧರು ಸೇರಿದಂತೆ ಯುವಕರು ತಮ್ಮ ಕಾಯಿಲೆಯಿಂದ ಹೊರ ಬಂದು ಸಹಜ ಹಾಗೂ ಚೈತನ್ಯದಾಯಕ ಜೀವನ ಶೈಲಿ ಅಳವಡಿಸಿಕೊಂಡಿದ್ದಾರೆ.
ವೃದ್ಧರ ಜತೆ ತಮ್ಮ ಕಚೇರಿಯ ಒತ್ತಡದ ಕೆಲಸದಿಂದ ಬಳಲಿ ಹಲವು ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಯುವಕರು ಸಹ ಈ ಜಿಮ್ಗೆ ಬರುತ್ತಾರೆ. ಮಹಿಳೆಯರು ಸಹ ನಿತ್ಯ ಒಂದು ಗಂಟೆ ವ್ಯಾಯಾಮ ಮಾಡಲು ಬರುತ್ತಿದ್ದಾರೆ. ಇತ್ತೀಚಿಗೆ ಸೊಂಟ ನೋವು, ಅಡುಗೆ ಮನೆಯ ಕೆಲಸದ ಒತ್ತಡದಿಂದ ಬಳಲಿ ಬೆಂಡಾದವರಿಗೆ ಇಲ್ಲಿ ಹೇಳಿಕೊಡುವ ಸಹಜ ವ್ಯಾಯಾಮ ಮನಸ್ಸಿಗೆ ಉಲ್ಲಾಸ ನೀಡುವುದರ ಜತೆ ಇಡೀ ದಿನ ಲವಲವಿಕೆಯಿಂದ ಇರುವಂತೆ ಮಾಡುತ್ತಿದೆ.