ವಿಜಯಪುರ: ಉಡುಪಿ ಪೇಜಾವರ ಮಠದ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಇಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಮೊದಲು ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯನ್ನು ಸ್ಮರಿಸಿದರು. ಶ್ರೀಗಳನ್ನು ಆಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿಗಳು ಸ್ವಾಗತಿಸಿದರು. ಇದಾದ ನಂತರ ಪೇಜಾವರ ಶ್ರೀಗಳು ವಿಜಯಪುರ ನಗರದ ದಲಿತರ ಮನೆಗಳಿಗೆ ಭೇಟಿ ನೀಡಿ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ ಮಾಡಿದರು.
ಇದೇ ವೇಳೆ ದಲಿತರ ಮನೆಯಲ್ಲಿ ಪೇಜಾವರ ಶ್ರೀಗಳ ಪಾದಪೂಜೆ ಕೂಡ ಮಾಡಲಾಯಿತು. ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಗೋಪಾಲ್ ಘಟಕಾಂಬಳೆ ಮನೆಯಲ್ಲಿ ಪಾದಪೂಜೆ ಮಾಡಲಾಯಿತು. ಬಂದಂತಹ ಭಕ್ತರಿಗೆ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ ಮಾಡಿ ಪ್ರಸಾದದ ರೂಪವಾಗಿ ಬಾಳೆಹಣ್ಣನ್ನ ವಿತರಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಮಾಡುವ ವಿಷಯದಲ್ಲಿ ಎಲ್ಲರೂ ಕೈಜೋಡಿಸಿದ್ದಾರೆ. ಹಾಗಾಗಿ ಆ ಮಂದಿರದ ಉದ್ಘಾಟನೆಗೆ ಆ ಹಬ್ಬಕ್ಕೆ ಎಲ್ಲರನ್ನು ಆಹ್ವಾನಿಸುವುದು ನಮ್ಮ ಕರ್ತವ್ಯ ಎಂದರು.
10 ಕೋಟಿ ಧನ ಸಂಗ್ರಹಿಸಿ ರಾಮ ಮಂದಿರಕ್ಕೆ ಕೊಟ್ಟಿದ್ದೇವೆ, ಆಹ್ವಾನ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ ಇದೇ ವೇಳೆ ಪ್ರತಿಕ್ರಿಯಿಸಿದ ಶ್ರೀಗಳು, ದೊಡ್ಡ ಮೊತ್ತದ ದೇಣಿಗೆ ಕೊಟ್ಟವರು ಬಹಳ ಮಂದಿ ಇದ್ದಾರೆ. ಅಷ್ಟು ಮಂದಿ ಕರೆದು ಕೂಡಿಸುವ ವ್ಯವಸ್ಥೆ ಅಲ್ಲಿ ಇಲ್ಲ. ಕೆಲವರನ್ನು ಕರೆದರೆ ಮಾತ್ರ ಕಾರ್ಯಕ್ರಮ ನಡೆಸಲು ಸಾಧ್ಯ ಆಗುತ್ತೆ. ಆ ದಿನ ಬರಲು ಅವಕಾಶ ಇಲ್ಲ, ಮುಂದಿನ ದಿನ ಬರಲಿಕ್ಕೆ ಎಲ್ಲರಿಗೂ ಮುಕ್ತ ಅವಕಾಶ ಇದೆ. ವಿಶ್ವ ಹಿಂದೂ ಪರಿಷತ್ ಹಿರಿಯ ಸದಸ್ಯರಿಗೂ ಯಾರು ಬರಬೇಡಿ ಎನ್ನುವ ಸಂದೇಶ ಇದೆ. ಮುಂದಿನ ದಿನಗಳಲ್ಲಿ ಬನ್ನಿ ಎಂದು ಹೇಳಿದ್ದಾರೆ.
ಮತ್ತೆ ಗೋಧ್ರಾದಂತಹ ಘಟನೆ ನಡೆಯಬಹುದು ಎಂಬ ಬಿ ಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅಂತಹ ಘಟನೆ ನಡೆಯುವ ಬಗ್ಗೆ ಮಾಹಿತಿ ಇದ್ದರೆ ಇಲಾಖೆಗೆ ಹೋಗಿ ಯಾಕೆ ಹೇಳುತ್ತಿಲ್ಲ. ಅವರು, ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಪ್ರಶ್ನಿಸಿದರು.
ಬಿಜೆಪಿ ಹಾಗೂ ಆರ್ಎಸ್ಎಸ್ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರಕ್ಕೆ, ಅಂತಹ ಸಿದ್ಧತೆಯನ್ನು ಅವರು ನಡೆಸುತ್ತಿದ್ದಾರೆ, ಭಾರತವನ್ನು ಹಿಂದೂರಾಷ್ಟ್ರ ಮಾಡಿದರೆ ಪಾಕಿಸ್ತಾನ ಮಾಡಲು ಯಾರೋ ಸಿದ್ಧತೆ ನಡೆಸುತ್ತಿದ್ದಾರೋ ಏನೋ. ಅಂತಹ ಸಿದ್ಧತೆ ಇಲ್ಲಿ ನಡೆಯುತ್ತಿದೆ ಎಂಬುದರ ಮುನ್ಸೂಚನೆ ಕೊಡುತ್ತಿದ್ದಾರೆ. ಅವರ ಹೇಳಿಕೆ ಸರಿಯಲ್ಲ ಎಂದು ಪೇಜಾವರ ಶ್ರೀ ಆಕ್ಷೇಪ ವ್ಯಕ್ತಪಡಿಸಿದರು.
ರಾಮಮಂದಿರ ಉದ್ಘಾಟನೆಗೆ ನಮಗೆ ಆಹ್ವಾನ ಇಲ್ಲ ಎಂಬ ವಿರೋಧ ಪಕ್ಷಗಳ ಹೇಳಿಕೆ ವಿಚಾರಕ್ಕೆ, ಇಂಥ ನಡವಳಿಕೆ ಸರಿಯಲ್ಲ, ರಾಮ ರಾಜಕೀಯ ವಸ್ತುವಾಗಿಲ್ಲ, ಶ್ರೀರಾಮ ಮಂದಿರ ವ್ಯಾಜ್ಯ ಹುಟ್ಟಿಕೊಂಡಿದ್ದು 500 ವರ್ಷಗಳ ಹಿಂದೆ, ಸ್ವಾತಂತ್ರ್ಯ ಬಂದು 75 ವರ್ಷಗಳಾಯಿತು. ದೇಶದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಸರ್ಕಾರ ಮಾಡಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಶ್ರೀರಾಮ ಮಂದಿರ ಮಾಡಿಕೊಡಿ ಎಂದು ಅವರ ಬಳಿ ಹಲವಾರು ಬಾರಿ ಕೇಳಲಾಗಿತ್ತು. ತಾವೂ ಮಾಡಲ್ಲ, ಬೇರೆಯವರು ಮಾಡಿದರೆ ಅದಕ್ಕೂ ಅಡ್ಡಗಾಲು ಹಾಕುತ್ತಾರೆ ಎಂದು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ಮಾತ್ರ ರಾಜಕಾರಣ ಮಾಡುತ್ತಿದೆ: ಬಸವರಾಜ ಬೊಮ್ಮಾಯಿ