ವಿಜಯಪುರ: ಉಸಿರಾಟದ ತೊಂದರೆಯಿದ್ದ ವ್ಯಕ್ತಿಯೋರ್ವ ಹಲವು ಆಸ್ಪತ್ರೆಗಳಿಗೆ ಅಲೆದಾಡಿದ್ದು, ಕೋವಿಡ್ ಭೀತಿಯಿಂದ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಹಿಂದೇಟು ಹಾಕಿವೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ರೋಗಿ ಮೃತಪಟ್ಟಿದ್ದು, ಆತನ ಕೊರೊನಾ ವರದಿ ನೆಗೆಟಿವ್ ಬಂದಿದೆ. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.
ಜಿಲ್ಲೆಯ ಸಿಂದಗಿ ತಾಲೂಕಿನ ಮಲಘಾಣ ಗ್ರಾಮದ ಜಮೀಲ್ ಅಹ್ಮದ್ ಎಂಬುವರು ಗುರುವಾರ ರಾತ್ರಿ ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿದ್ದರು. ತಕ್ಷಣ ಅವರನ್ನು ಸಿಂದಗಿ, ವಿಜಯಪುರದ ಕೆಲ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಅಲೆದಾಡಿದ್ದಾರೆ. ಯಾರು ಸ್ಪಂದಿಸದಿದ್ದಾಗ ಶುಕ್ರವಾರ ಬೆಳಗ್ಗೆ ರೋಗಿ ಜತೆ ಪೋಷಕರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡಿದ್ದಾರೆ. ಡಿಸಿ ಖುದ್ದಾಗಿ ಜಿಲ್ಲಾಸ್ಪತ್ರೆಗೆ ಕರೆ ಮಾಡಿ ರೋಗಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಸೂಚಿಸಿದ್ದರು. ನಂತರ ಅದೇ ದಿನ ರಾತ್ರಿ ರೋಗಿ ಸಾವನ್ನಪ್ಪಿದ್ದಾನೆ.
ರೋಗಿ ಜಮೀಲ್ ಅಹ್ಮದ್ಗೆ ತೀವ್ರ ಉಸಿರಾಟದ ತೊಂದರೆ ಜತೆಗೆ ಕೊರೊನಾ ಬಂದಿರುವ ಭಯ ಹೆಚ್ಚಾಗಿ ಕಾಡುತ್ತಿತ್ತು. ಇದರಿಂದ ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದನು. ತಡರಾತ್ರಿ ಆತ ಮೃತನಾದ ಬಳಿಕ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗಟಿವ್ ಬಂದಿದೆ. ಮೃತ ವ್ಯಕ್ತಿಯು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಆಕಸ್ಮಿಕವಾಗಿ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯವರು ಈ ರೋಗಿಯನ್ನು ಕೊರೊನಾ ದೃಷ್ಟಿಯಿಂದ ನೋಡದೇ ಬೇರೆ ಕಾಯಿಲೆ ಇರಬಹುದು ಎಂದು ಚಿಕಿತ್ಸೆ ನೀಡಿದ್ದರೆ, ಆತ ಬದುಕಬಹುದಿತ್ತು. ವೈದ್ಯರು ಕೇವಲ ಕೊರೊನಾ ದೃಷ್ಟಿ ಬಿಟ್ಟು ಬೇರೆ ಕಾಯಿಲೆ ಇರಬಹುದು ಎಂದು ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.