ವಿಜಯಪುರ: ವೈದ್ಯರು ಸೂಕ್ತ ಚಿಕಿತ್ಸೆ ನೀಡದ ಕಾರಣ ಬಾಲಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಬಾಲಕನ ಪೋಷಕರು ಆಸ್ಪತ್ರೆ ಮುಂಭಾಗ ಗಲಾಟೆ ಮಾಡಿದ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಜಿಲ್ಲೆಯ ಹಿಟ್ಟಳ್ಳಿ ಗ್ರಾಮದ ಸುಪ್ರೀತ ಎಂಬ ಏಳು ವರ್ಷ ದ ಬಾಲಕನಿಗೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಸುಪ್ರೀತ ಮೃತಪಟ್ಟಿದ್ದಾನೆ, ಮಗನ ಸಾವಿಗೆ ಆಸ್ಪತ್ರೆ ವೈದ್ಯರೇ ಕಾರಣ ಎಂದು ಆರೋಪಿಸಿ ಬಾಲಕನ ಪೋಷಕರು ಆಸ್ಪತ್ರೆ ಟೇಬಲ್ ಗ್ಲಾಸ್ ಒಡೆದು ಹಾಕಿ ತಮ್ಮ ಆಕ್ರೋಶ ಹೊರ ಹಾಕಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವೈದ್ಯಾಧಿಕಾರಿ ರವೀಂದ್ರ ಪಾಟೀಲ, ಬಾಲಕ ಡೆಂಘೀ ಜ್ವರದಿಂದ ಬಳಲುತ್ತಿದ್ದ. ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ಈಗ ಅನಾವಶ್ಯಕವಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಆತನ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವಲ್ಲ ಎಂದು ತಿಳಿಸಿದ್ದಾರೆ.
ಇನ್ನು ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ, ಯಾವುದೇ ಗಲಾಟೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದರು.