ವಿಜಯಪುರ: ಕೊರೊನಾ ವೈರಸ್ ಸೋಂಕಿತರಿಂದ ಪ್ರಭಾವಕ್ಕೆ ಒಳಗಾಗಿರುವ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸಿದವರನ್ನು ಕೂಡಾ ಹೋಮ್ ಕ್ವಾರಂಟೈನ್ ಮಾಡುವಂತಹ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್-19 ಮುನ್ನೆಚ್ಚರಿಕೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈವರೆಗೆ ವಿದೇಶದಿಂದ ಜಿಲ್ಲೆಗೆ ಆಗಮಿಸಿರುವವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಇನ್ನೊಂದು ಪರಿಣಾಮಕಾರಿಯಾದ ನಿರ್ಣಯಕೈಗೊಂಡಿದ್ದು, ಕೊರೋನಾ ವೈರಸ್‍ನಿಂದ ಪ್ರಭಾವಿತವಾಗಿರುವ ಮಹಾರಾಷ್ಟ್ರ, ಕೇರಳ, ತೆಲಂಗಾಣ ಸೇರಿದಂತೆ ಇನ್ನಿತರ ರಾಜ್ಯಗಳಿಂದ ಮತ್ತು ರಾಜ್ಯದ 10 ಜಿಲ್ಲೆಗಳಾದ ಬೆಂಗಳೂರು ನಗರ, ಗ್ರಾಮೀಣ, ಮಂಗಳೂರು, ಮೈಸೂರ, ದಾವಣಗೆರೆ, ಧಾರವಾಡ, ತುಮಕೂರು, ಚಿಕ್ಕಬಳ್ಳಾಪೂರ, ಕಲಬುರ್ಗಿ, ಉಡುಪಿ, ಕೊಡಗು ಜಿಲ್ಲೆಗಳಿಂದ ವಿಜಯಪುರ ಜಿಲ್ಲೆಗೆ ಆಗಮಿಸಿದವರನ್ನು ಗುರುತಿಸಿ ಹೋಮ್ ಕ್ವಾರಂಟೈನ್ ಮಾಡಲಾಗುವುದು ಎಂದರು.
ಜಿಲ್ಲೆಯ ಪ್ರತೀ ಗ್ರಾಮ ಮತ್ತು ತಾಂಡಾಗಳಿಗೆ ಮರಳಿರುವ ಇಂತಹ ಜನರನ್ನು ಗುರುತಿಸಿ ತಪಾಸಣೆಗೆ ಒಳಪಡಿಸಲು ಈಗಾಗಲೇ ಆರೋಗ್ಯ ಇಲಾಖೆ ಮತ್ತು ಇತರ ಅಧಿಕಾರಿಗಳಿಗೆ ತಿಳಿಸಲಾಗಿದೆ. ಹೋಮ್ ಕ್ವಾರಂಟೈನ್‍ದಲ್ಲಿ ಸೂಕ್ತ ತಪಾಸಣೆಗೆ ನಿಗಾ ಇಡಲು ಪೊಲೀಸ್ ಇಲಾಖೆಯ ಸಿಬ್ಬಂದಿ, ಇತರ ಅವಶ್ಯಕ ಸಿಬ್ಬಂದಿ ನಿಯೋಜಿಸಲಾಗುವುದು. ಸಂಬಂಧಪಟ್ಟ ಮನೆಗೆ ಕರಪತ್ರ ಅಂಟಿಸಲಾಗುವುದು. ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚು ಜನರು ಬಂದ ಪರಿಶೀಲನೆ ಆಧಾರದ ಮೇಲೆ ಆಯಾ ಕುಟುಂಬ ಮತ್ತು ತಾಂಡಾಗಳನ್ನೇ ಹೋಮ್ ಕ್ವಾರಂಟೈನ್ಗಳಾಗಿ ಘೋಷಣೆಗೂ ಸಹ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇಲ್ಲಿಯವರೆಗೆ 329 ಜನರು ವಿದೇಶದಿಂದ ಬಂದಿರುವ ಬಗ್ಗೆ ವರದಿಯಾಗಿದೆ. 41 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 186 ಜನ 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 102 ಜನ ಹೋಮ್ ಕ್ವಾರಂಟೈನ್‍ದಲ್ಲಿದ್ದಾರೆ. ಈವರೆಗೆ ಕಳುಹಿಸಿದ 10 ಪ್ರಕರಣಗಳಲ್ಲಿ 8 ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಹೇಳಿದರು.