ವಿಜಯಪುರ: ಕೊರೊನಾ ಗೆದ್ದು ಬಂದಿದ್ದ 91 ವರ್ಷದ ವೃದ್ಧೆಯಿಂದಲೇ ನಗರದಲ್ಲಿ ಹೊಸ ಕೋವಿಡ್ ಆಸ್ಪತ್ರೆ ಉದ್ಘಾಟಿಸಿದ ವಿಶೇಷ ಪ್ರಸಂಗ ನಡೆಯಿತು.
ನಗರದ ಶಿಖಾರಖಾನೆ ಚೌಧರಿ ಆಸ್ಪತ್ರೆಯಲ್ಲಿ ಹೊಸದಾಗಿ ಕೋವಿಡ್ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಈ ಆಸ್ಪತ್ರೆಯನ್ನು ಉದ್ಘಾಟಿಸಿದವರು 91 ವರ್ಷದ ಅಜ್ಜಿ ಸೀನಾಬಾಯಿ ಲೋನಾರೆ.
ವಿಶೇಷವೆಂದರೆ ಅನಾರೋಗ್ಯದಿಂದ ಈ ಅಜ್ಜಿ ಇದೇ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಆಕೆಯ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿತ್ತು. ಸತತ 21 ದಿನಗಳ ಕಾಲ ಕೃತಕ ಉಸಿರಾಟದ ಮೇಲೆಯೇ ಜೀವನ್ಮರಣದ ನಡುವೆ ಹೋರಾಟ ನಡೆಸಿ ಸಾವು ಗೆದ್ದು ಬಂದಿದ್ದಾರೆ. ಇದಕ್ಕೆ ಅಜ್ಜಿಯಿಂದಲೇ ಇಂದು ಹೊಸ ಆಸ್ಪತ್ರೆ ಉದ್ಘಾಟಿಸಲಾಯಿತು.
ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾಗ ವೈದ್ಯರು, ನರ್ಸ್ಗಳ ಸೇವೆ ನೆನೆದು ಅಜ್ಜಿ ಆನಂದಭಾಷ್ಪ ಸುರಿಸಿದರು. ಮಹಾಮಾರಿ ರೋಗಕ್ಕೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ಹೇಳಿದರು. ಅಂದಿನ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿ, ಕೊರೊನಾ ಬಂದ್ರೆ ಅಂಜಬೇಡಿ. ಏನು ಆಗುವುದಿಲ್ಲ. ಡಾಕ್ಟರ್ ಹೇಳಿದಂಗೆ ಕೇಳ್ರಿ ಎಂದು ಸಲಹೆ ನೀಡಿದರು.
ನಂತರ ಅಜ್ಜಿಯನ್ನು ಉಳಿಸಿಕೊಟ್ಟ ವೈದ್ಯರಿಗೆ ಅಜ್ಜಿ ಮನೆಯವ್ರು ಸನ್ಮಾನಿಸಿದರು. ನಂತರ ಆಸ್ಪತ್ರೆಯ ವೈದ್ಯ ಡಾ. ರವಿಕುಮಾರ ಚೌಧರಿ ಮಾತನಾಡಿ, ಕೋವಿಡ್ ಸೋಂಕಿನಿಂದ ಗುಣಮುಖರಾದ ಅಜ್ಜಿಯಿಂದ ಆಸ್ಪತ್ರೆ ಉದ್ಘಾಟಿಸುವ ಉದ್ದೇಶ ಕುರಿತು ವಿವರಿಸಿದರು.