ವಿಜಯಪುರ: ದೇಶ ಹಾಗೂ ರಾಜ್ಯಾದ್ಯಂತ ಲಾಕ್‍ಡೌನ್ ಅನ್ವಯ ನಿರ್ಬಂಧ ಇದ್ದು, ಜಿಲ್ಲಾದ್ಯಂತ ಜೀವನಾವಶ್ಯಕ ವಸ್ತು ಮತ್ತು ಸರಬರಾಜುವಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ತಿಳಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲಾದ್ಯಂತ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ವಸ್ತುಗಳ ಮಾರಾಟ ಮತ್ತು ಸಾಗಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ತರಕಾರಿ, ದಿನಸಿ ಅಂಗಡಿಗಳು (ಕಿರಾಣಿ ಅಂಗಡಿ)ಗಳಿಗೆ ಮತ್ತು ಹಣ್ಣು, ಹೂ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಈಗಾಗಲೇ ತಳ್ಳುವ ಗಾಡಿಗಳ ಮೂಲಕ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಇನ್ನು ಮುಂದೆ ನಗರದಾದ್ಯಂತ ತೋಟಗಾರಿಕೆ ಇಲಾಖೆ ಮೇಲ್ವಿಚಾರಣೆಯಲ್ಲಿ ನಗರದ 10 ಭಾಗಗಳಲ್ಲಿ ಹಾಪ್‍ಕಾಮ್ಸ್ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಮಳಿಗೆಗಳ ಮೂಲಕ ಮಾರಾಟಕ್ಕೂ ಸೂಚನೆ ನೀಡಲಾಗಿದೆ ಎಂದರು.

ನಗರದ 35 ವಾರ್ಡ್ಗಳ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಯ ವಾರ್ಡ್ವಾರು ತಲಾ ಇಬ್ಬರು ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲೆಯ, ನಗರ ,ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಕೂಡಾ ತಲಾ ಇಬ್ಬರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಆರೋಗ್ಯ ಸಂಬಂಧಿತ ಮತ್ತು ತುರ್ತು ಸೇವೆ ಸಂಬಂಧಿಸಿದ ದೂರುಗಳನ್ನು ನೀಡಬಹುದಾಗಿದೆ ಎಂದು ತಿಳಿಸಿದರು.