ವಿಜಯಪುರ: ಮುಸ್ಲಿಂ ಬಾಂಧವರ ಪವಿತ್ರ ಬಕ್ರೀದ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾ ಮೈದಾನದಲ್ಲಿ ನಿರ್ವಹಿಸುವುದನ್ನು ಕೋವಿಡ್ ಹಿನ್ನೆಲೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಬಕ್ರೀದ್ ದಿನದಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತಹ ಮಸೀದಿಗಳ ಆಡಳಿತ ಸಮಿತಿಗಳು ಸರ್ಕಾರದ ಆದೇಶದನ್ವಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಆಯಾ ಮಸೀದಿಗಳಲ್ಲಿ ಗರಿಷ್ಠ 50 ಜನ ಮೀರದಂತೆ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಬಹುದು. ಒಂದು ವೇಳೆ ಅಧಿಕ ಜನ ಆಗಮಿಸಿದ್ದಲ್ಲಿ ಎರಡು, ಮೂರು ಬ್ಯಾಚ್‍ಗಳಲ್ಲಿ ನಮಾಜ್ ನಿರ್ವಹಿಸಬಹುದು.
ಯಾವುದೇ ಮಸೀದಿಯ ಆಡಳಿತ ಮಂಡಳಿಯು ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಶುಕ್ರವಾರದ ಜುಮ್ಮಾ ಪ್ರಾರ್ಥನೆ ಸಹಿತ ದಿನದ ಐದು ಹೊತ್ತಿನ ಸಾಮೂಹಿಕ ಪ್ರಾರ್ಥನೆಯನ್ನು ಈಗಾಗಲೇ ನಿರ್ಬಂಧಿಸಿದ್ದಲ್ಲಿ ಅಂತಹ ಮಸೀದಿ ಆಡಳಿತ ಸಮಿತಿಗಳು ಈ ನಿರ್ಧಾರವನ್ನು ಬಕ್ರೀದ್ ನಮಾಜ್‍ನಲ್ಲಿ ಸಹ ಮುಂದುವರೆಸಬಹುದು ಎಂದು ತಿಳಿಸಿದ್ದಾರೆ.
ಮಸೀದಿಗಳನ್ನು ಹೊರತುಪಡಿಸಿ ಇತರೆ ಯಾವುದೇ ಸ್ಥಳಗಳಲ್ಲಿ ಅಂದರೆ ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರ ತೆರೆದ ಜಾಗೆಗಳಲ್ಲಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜಿಸುವಂತಿಲ್ಲ ಎಂದು ಡಿಸಿ ಆದೇಶಿಸಿದ್ದಾರೆ.