ಮುದ್ದೇಬಿಹಾಳ: ಜಮ್ಮು- ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ವಿದ್ಯುತ್ ಅವಘಡದಿಂದ 2020ರ ಆ. 30 ರಂದು ಹುತಾತ್ಮರಾದ ತಾಲೂಕಿನ ಬಸರಕೋಡ ಗ್ರಾಮದ ಬಿಎಸ್‌ಎಫ್ ಯೋಧ ಶಿವಾನಂದ ಬಡಿಗೇರ ಅವರ ಹೆಸರು ಚಿರಸ್ಥಾಯಿಗೊಳಿಸುವಲ್ಲಿ ದೇಶ ಪ್ರೇಮಿಗಳು ವಿಫಲರಾಗಿದ್ದಾರೆಯೇ ? ಎನ್ನುವ ಪ್ರಶ್ನೆ ಯೋಧನ ಸಮಾಧಿ ನೋಡಿದಾಗ ಎಲ್ಲರ ಮನದಲ್ಲಿ ಮೂಡುತ್ತಿದೆ.
ಹೌದು, ಕರ್ತವ್ಯದ ವೇಳೆ ಮೃತಪಟ್ಟ ಯೋಧನ ಅಂತ್ಯಕ್ರಿಯೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗಿತ್ತು. ಇನ್ನೇನು ತಿಂಗಳೊಳಗೆ ಯೋಧನ ಸ್ಮಾರಕ ಕಟ್ಟೇ ಬಿಡುತ್ತಾರೇನೋ ಎನ್ನುವಷ್ಟು ಭರವಸೆಯನ್ನು ಹಲವರು ನೀಡಿದ್ದರು. ಆದರೆ, ಈವರೆಗೆ ಯೋಧನ ಸಮಾಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸವೇ ಆಗಿಲ್ಲ.
ಈಡೇರದ ಶ್ರೀಗಳ ಆಶಯ :
ಯೋಧನ ಪಾರ್ಥೀವ ಶರೀರ ಮುದ್ದೇಬಿಹಾಳದ ಕಾರ್ಗಿಲ್ ಸ್ಮಾರಕವಿರುವ ಸೈನಿಕ ಮೈದಾನಕ್ಕೆ ಬಂದ ವೇಳೆ ಅಂದು ಕುಂಟೋಜಿ ಚೆನ್ನವೀರ ದೇವರು, ದೇಶದ ಸಲುವಾಗಿ ತಮ್ಮ ಪ್ರಾಣಾರ್ಪಣೆ ಮಾಡಿರುವ ಯೋಧ ಶಿವಾನಂದ ಬಡಿಗೇರ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕೆಂದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಅವರ ಹೆಸರಿನಲ್ಲಿ ಒಂದು ಉದ್ಯಾನ, ಸ್ಮಾರಕ ನಿರ್ಮಾಣ ಮಾಡುವ ಕೆಲಸ ಮಾಡಿಸಬೇಕು ಎಂದು ಹೇಳಿದ್ದರು. ಆದ್ರೆ ಅದ್ಯಾವ ಅಭಿವೃದ್ಧಿ ಕಾರ್ಯ ಈವರೆಗೆ ಆಗಿಯೇ ಇಲ್ಲ.
ಈ ಸುದ್ದಿಯನ್ನೂ ಓದಿ: ಹುತಾತ್ಮ ಯೋಧ ಶಿವಾನಂದಗೆ ಕ್ಯಾಂಡಲ್ ಮಾರ್ಚ್ ಮೂಲಕ ಗೌರವ
ಆರಂಭದಲ್ಲಿ ಉಕ್ಕಿ ಹರಿದಿದ್ದ ಅಭಿಮಾನ ಈಗಿಲ್ಲ:
ಸೆಪ್ಟೆಂಬರ್ 2, 2020ರಂದು ಮುದ್ದೇಬಿಹಾಳ ಪಟ್ಟಣದಿಂದ ಎಂಜಿವಿಸಿ ಕಾಲೇಜ್ನವರೆಗೆ ಬೈಕ್ ರ‍್ಯಾಲಿ ಮೂಲಕ ಯೋಧನ ಪಾರ್ಥೀವ ಶರೀರದ ಮೆರವಣಿಗೆ ನಡೆಸಿ ಬಸರಕೋಡಕ್ಕೆ ಬೀಳ್ಕೊಡಲಾಗಿತ್ತು. ಬಳಿಕ ಯೋಧನ ಮನೆಗೆ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗಿತ್ತು. ಆಗ ಕಿಕ್ಕಿರಿದು ಸೇರಿದ್ದ ಸಾವಿರಾರು ಜನರು ಶಿವಾನಂದ ಬಡಿಗೇರ ಅಮರ್ ಹೈ ಎಂಬ ಘೋಷಣೆಗಳನ್ನು ಮುಗಿಲು ಮುಟ್ಟುವಂತೆ ಕೂಗಿ ದೇಶಾಭಿಮಾನ ಮೆರೆದಿದ್ದರು. ಆದ್ರೀಗ ಆ ಅಭಿಮಾನ ಎಲ್ಲಿ ಹೋಯಿತೆಂಬ ಪ್ರಶ್ನೆ ಕಾಡಿದೆ.
ಈ ಸುದ್ದಿಯನ್ನೂ ಓದಿ: ಮುದ್ದೇಬಿಹಾಳ: ಹುತಾತ್ಮ ಯೋಧನ ಮನೆಗೆ ಜಿಪಂ ಅಧ್ಯಕ್ಷೆ ಭೇಟಿ
ಸೇನೆಯಿಂದ 15 ಲಕ್ಷ ವಿಮೆ ಜಮಾ:
ಹುತಾತ್ಮ ಯೋಧ ಶಿವಾನಂದ ಬಡಿಗೇರ ಅವರ ಮರಣದ ನಂತರ ಅವರ ಖಾತೆಗೆ15 ಲಕ್ಷ ರೂ. ವಿಮಾ ಹಣ ಜಮಾ ಆಗಿದೆ ಎಂದು ಅವರ ಸಹೋದರ ಮೌನೇಶ ಬಡಿಗೇರ ಹೇಳುತ್ತಾರೆ.
ಒಟ್ಟಿನಲ್ಲಿ ದೇಶ ಸೇವೆ ಸಲ್ಲಿಸಿದ ಈ ವೀರಯೋಧನ ಸಮಾಧಿ ಬಳಿ ಅಭಿವೃದ್ಧಿ ಕಾರ್ಯಗಳಾಗಬೇಕೆಂಬುದೇ ಎಲ್ಲರ ಆಶಯ.