ವಿಜಯಪುರ: ಮಹಾರಾಷ್ಟ್ರದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಸ್ಪಷ್ಟನೆ ನೀಡಿದ್ದು, ತಮ್ಮನ್ನು ವರಿಷ್ಠರು ಸಿಎಂ ಮಾಡುತ್ತಿರುವ ವಿಚಾರ ಮಾಧ್ಯಮ ಸೃಷ್ಟಿಯಾಗಿದೆ. ಸಿಎಂ ಏಕನಾಥ ಶಿಂಧೆ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಿದರು. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಮಹಾರಾಷ್ಟ್ರದಲ್ಲಿ ಸಿಎಂ ಬದಲಾವಣೆ ಮಾಡುವ ಯಾವುದೇ ಪ್ತಸ್ತಾವನೆ ಇಲ್ಲ. ಏಕನಾಥ ಶಿಂಧೆ ಅವರೇ ಪೂರ್ಣಾವಧಿ ಸಿಎಂ ಆಗಿರುತ್ತಾರೆ. ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸಲಾಗುವುದು ಎಂದರು.
ಇನ್ನೂ ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಕುರಿತು ಮಾತನಾಡಿದ ಅವರು, ಗಡಿಭಾಗದಲ್ಲಿ ಮರಾಠಿ ಭಾಷಿಕರಿಗೆ ಆರೋಗ್ಯ ವಿಮೆ ನೀಡಿದ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಈಗ ಕೊಟ್ಟಿರುವುದಲ್ಲ, ಮೊದಲಿಂದಲೂ ಅವರಿಗೆ ಕೊಡಲಾಗುತ್ತಿದೆ ಎಂದ ಅವರು, ಅರ್ಧಕ್ಕೆ ಉತ್ತರ ನಿಲ್ಲಿಸಿ, ಮುಂದೆ ಮಾತನಾಡಲು ನಿರಾಕರಣೆ ಮಾಡಿದರು.
ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನಾಚರಣೆ ವಿಚಾರವಾಗಿಯೂ ಸಹ ಸೈಲೆಂಟ್ ಆಗಿ ಉತ್ತರಿಸಿದ ಅವರು, ಬೆಳಗಾವಿಯಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನವನ್ನು ಮಹಾರಾಷ್ಟ್ರ ಬಿಜೆಪಿ ಎಂದೂ ವಿರೋಧಿಸಿಲ್ಲ. ನಾವು ಬಿಜೆಪಿ ನಾವು ಕರಾಳ ದಿನಾಚರಣೆಗೆ ಯಾವತ್ತೂ ಸಪೋರ್ಟ್ ಮಾಡಿಲ್ಲ. ನಾವು ಎಂಇಎಸ್‌ಗೆ ಸಪೋರ್ಟ್ ಮಾಡಲ್ಲ ಎಂದು ಸ್ಪಷ್ಟಪಡಿಸಿದರು. ಕರಾಳ ದಿನಾಚರಣೆಯ ಬಗ್ಗೆ ಎಂಇಎಸ್ ಅನ್ನು ಕೇಳಿ ಎಂದು ಫಡ್ನವಿಸ್ ಉತ್ತರಿಸಿದರು.
ರಾಜ್ಯ ಸರ್ಕಾರವನ್ನು ಹೊಗಳಿದ ದೇವೇಂದ್ರ: ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನಲ್ಲಿ ಕರ್ನಾಟಕದಲ್ಲಿ ಬೊಮ್ಮಾಯಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಜನರು ಡಬಲ್ ಇಂಜಿನ್ ಸರ್ಕಾರವನ್ನು ಮತ್ತೊಮ್ಮೆ ಆಯ್ಕೆ ಮಾಡುತ್ತಾರೆ. ದೇಶದಲ್ಲಿ ಪ್ರಧಾನಿ ಬಡವರ ಕಲ್ಯಾಣ ಮಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಮೂಲಕ ಕರ್ನಾಟಕದ ಬಡವರಿಗೂ ಇದರ ಲಾಭ ಸಿಕ್ಕಿದೆ. ಕುಡಿಯುವ ನೀರು, ಸ್ವಂತ ಮನೆ, ಮನೆಮನೆಗೆ ಶೌಚಾಲಯ, ಉಚಿತ ಗ್ಯಾಸ್ ಸಿಲಿಂಡರ್, ರೈತರಿಗೆ ಕೃಷಿ ಸಮ್ಮಾನ ಯೋಜನೆಯಿಂದ 4 ರಿಂದ 10 ಸಾವಿರ ನೀಡಿದ ಅಪರೂಪದ ಸರ್ಕಾರ ಇದಾಗಿದೆ ಎಂದರು.
ವಿದ್ಯಾರ್ಥಿ ವೇತನ, ಬಿಪಿಎಲ್ ಹೊಂದಿದ ಮಹಿಳೆಯರಿಗೆ 2 ಸಾವಿರ ಕೊಡಲಾಗುತ್ತಿದೆ. ನೀರಾವರಿಗಾಗಿ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿದೆ. ಎಸ್‌ಸಿ ಎಸ್ಟಿ, ಲಿಂಗಾಯತ, ಒಕ್ಕಲಿಗರಿಗೆ ಕರ್ನಾಟಕ ಸರ್ಕಾರ ಸಾಮಾಜಿಕ ನ್ಯಾಯ ನೀಡಿದೆ. ಬಿಜೆಪಿಗೆ ವಿಕಾಸ ಬೇಕು, ಸಬ್ ಕಾ ಸಾತ್ ಸಬ್ ವಿಕಾಸ ಎಂದರು.
ಕಾಂಗ್ರೆಸ್ ವಿರುದ್ಧ ಟೀಕೆ: ಬಿಜೆಪಿ ವೋಟ್ ಬ್ಯಾಂಕ್ ರಾಜಕಾರಣ ಮಾಡಲ್ಲ, ಇದರ ವಿರುದ್ಧ ಬಿಜೆಪಿ ಹೋರಾಟವನ್ನು ಮಾಡಿದೆ. ಬೊಮ್ಮಾಯಿ ಸರ್ಕಾರ ಯೋಜನೆಗಳನ್ನು ಹೊಗಳಿದರು. ಬಿಜೆಪಿಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಯತ್ನಾಳ್ ಅವರು ಫೇಮಸ್ ಹಾಗೂ ಪವರ್ಫುಲ್ ಇದ್ದಾರೆ. ಯತ್ನಾಳರಿಂದ ಈ ಭಾಗದಲ್ಲಿ ಪಕ್ಷ ಹೆಚ್ಚಿನ ಸೀಟು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೇ 40ರಷ್ಟು ಭ್ರಷ್ಟಾಚಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜನರು ಬಿಜೆಪಿಯನ್ನು ಆಯ್ಕೆ ಮಾಡ್ತಾರೆ. ಕಾಂಗ್ರೆಸ್ನವರು ಆರೋಪ ಮಾಡಿ ಓಡಿ ಹೋಗ್ತಾರೆ. ಕಾಂಗ್ರೆಸ್ನದ್ದು ಹಿಟ್ ಅಂಡ್ ರನ್ ಪಾಲಿಸಿ. ಸಾಕ್ಷ್ಯಾಧಾರ ಇಲ್ಲದೇ ಆರೋಪ ಮಾಡ್ತಾರೆ. ಕರ್ನಾಟಕ ಅವರಿಗೆ ಎಟಿಎಂ ಆಗಿತ್ತು, ಇಲ್ಲಿಂದ ಹಣ ತಗೊಂಡು ಹೋಗ್ತಾ ಇದ್ರು, ಆದರೆ ಈಗ ಆ ಎಟಿಎಂ ಅನ್ನು ಬಿಜೆಪಿ ಬಂದ್ ಮಾಡಿದೆ. ಹೀಗಾಗಿ ಕಾಂಗ್ರೆಸ್ ಕಂಗೆಟ್ಟು ಹೋಗಿದೆ ಎಂದರು.
ಇದನ್ನೂ ಓದಿ: ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ.. ಕಾಂಗ್ರೆಸ್ 150 ಸ್ಥಾನ ಪಡೆಯಲಿದೆ: ಡಿ.ಕೆ ಶಿವಕುಮಾರ್