ವಿಜಯಪುರ: ಕೋವಿಡ್ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಲು ಅನುಕೂಲವಾಗುವಂತೆ ಮತ್ತು ತಕ್ಷಣ ಚಿಕಿತ್ಸಾ ಹಾಸಿಗೆಗಳ ಅಂಕಿ-ಅಂಶ ಲಭ್ಯವಾಗಲು ವಿನೂತನ ಆ್ಯಪ್ ಅನ್ನು ಜಿಲ್ಲಾಡಳಿತ ಅಭಿವೃದ್ಧಿಪಡಿಸಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿನೂತನ ಆ್ಯಪ್ ಅನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು. ಜಿಲ್ಲೆಯ ಜಿಲ್ಲಾಸ್ಪತ್ರೆ, ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಲಭ್ಯವಿರುವ ಖಾಲಿ ಹಾಸಿಗೆಗಳ ಮಾಹಿತಿ ಈ ಆ್ಯಪ್ ಮೂಲಕ ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ವೆಬ್‍ಸೈಟ್‍ನಲ್ಲಿ ಲಭ್ಯವಾಗಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಆ್ಯಪ್ ಅನ್ನು ಕನ್ನಡ ಆವೃತ್ತಿಯಲ್ಲೂ ಪಡೆಯಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆವಾರು ಖಾಲಿ ಹಾಸಿಗೆಗಳ ಸಮಗ್ರ ಮಾಹಿತಿ ತಕ್ಷಣ ಲಭ್ಯವಾಗಲು ಈ ಆ್ಯಪ್ ಸಹಕಾರಿಯಾಗಲಿದ್ದು, ಆರೋಗ್ಯ ಇಲಾಖೆ, ಖಾಸಗಿ ಆಸ್ಪತ್ರೆಗಳು ಮತ್ತು ಎನ್.ಐ.ಸಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಅದರಂತೆ ಆ್ಯಪ್ ನ ಸಮರ್ಪಕ ನಿರ್ವಹಣೆಗೆ ಸೂಕ್ತ ತರಬೇತಿಯನ್ನು ಆರೋಗ್ಯ ಸಿಬ್ಬಂದಿ ಮತ್ತು ಆಯಾ ತಹಶೀಲ್ದಾರರ ಕಚೇರಿಯ ನುರಿತ ಡೇಟಾ ಆಪರೇಟರ್ಗಳಿಗೆ ಎನ್.ಐ.ಸಿ ಮೂಲಕ ನೀಡಬೇಕು ಎಂದು ಎನ್.ಐ.ಸಿ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಇನ್ಫೋ ಆ್ಯಪ್ ಅನ್ನು ಜಿಲ್ಲಾಧಿಕಾರಿಗಳು ಉದ್ಘಾಟನೆ ಮಾಡಿ ಬಿಡುಗಡೆಗೊಳಿಸಿದ್ದು, busybee covinfo app ಅಪ್ಲಿಕೇಶನ್ ಹೆಸರಿನಲ್ಲಿ ಆ್ಯಪ್ ತರಬೇತಿ ನಂತರ ಕಾರ್ಯ ನಿರ್ವಹಿಸಲಿದೆ ಎಂದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಂದ್ರ ಕಾಪ್ಸೆ, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಡಾ. ಲಕ್ಕಣ್ಣವರ, ಡಾ. ಮಲ್ಲನಗೌಡ ಬಿರಾದಾರ ಸೇರಿದಂತೆ ಖಾಸಗಿ ಆಸ್ಪತ್ರೆಗಳ ತಜ್ಞ ವೈದ್ಯರು ಉಪಸ್ಥಿತರಿದ್ದರು.