ಮುದ್ದೇಬಿಹಾಳ(ವಿಜಯಪುರ) : ತಾಲೂಕಿನ ನಾಲತವಾಡಕ್ಕೆ ಹೋಗುವ ರಸ್ತೆ ತುಂಬೆಲ್ಲಾ ಗುಂಡಿಗಳಿದ್ದು, ಸರೂರ ಕ್ರಾಸ್ ಬಳಿಯಿರುವ ಸೇತುವೆಯ ಗುಂಡಿಗಳಿಂದ ವಾಹನ ಸವಾರರು ಹೈರಾಣಾಗಿದ್ದಾರೆ.
ಮುದ್ದೇಬಿಹಾಳ ಪಟ್ಟಣದಿಂದ ಅಂದಾಜು 2 ಕಿ.ಮೀ ದೂರವಿರುವ ಈ ಸೇತುವೆಯ ಮುಂಭಾಗದಲ್ಲಿ ಮಣ್ಣು ಕೆಳಗಡೆ ಇಳಿದಿದ್ದು, ದೊಡ್ಡ-ದೊಡ್ಡ ಗುಂಡಿಗಳಾಗಿವೆ. ಭಾರೀ ವಾಹನಗಳ ಸಂಚಾರ ಇತ್ತೀಚೆಗೆ ಹೆಚ್ಚಾಗಿದ್ದರಿಂದ ರಸ್ತೆಯಲ್ಲಿ ಬಿರುಕುಗಳು ಹೆಚ್ಚಾಗಿವೆ. ಗುಣಮಟ್ಟದ ಕಾಮಗಾರಿಗಳಿಗೆ ಹೆಸರಾಗಿರುವ ಗುತ್ತಿಗೆದಾರ ಎಸ್ ಎಸ್ ಆಲೂರ ಕಂಪನಿಯವರು ಈ ರಸ್ತೆ ನಿರ್ಮಿಸಿದ್ದರು. ಆದರೂ ಕೂಡ ರಸ್ತೆಯಲ್ಲಿ ದೊಡ್ಡ-ದೊಡ್ಡ ಗುಂಡಿಗಳಾಗಿವೆ.
ನಾಲತವಾಡ ಮೂಲಕ ನಾರಾಯಣಪೂರ ಭಾಗಕ್ಕೆ ತೆರಳುವ ಭಾರೀ ವಾಹನಗಳಿಂದ ಕವಡಿಮಟ್ಟಿ ಗ್ರಾಮ ಹಾಗೂ ನಾಗರಬೆಟ್ಟ ಗ್ರಾಮ ನಿರ್ಗಮಿಸುವ ರಸ್ತೆಯಲ್ಲಿ ಹೆಚ್ಚು ಗುಂಡಿಗಳಾಗಿವೆ. ಸರೂರ ಕ್ರಾಸ್ ಬಳಿ ಬಿದ್ದಿರುವ ರಸ್ತೆಯ ಗುಂಡಿಯಿಂದಾಗಿ ಸಾಕಷ್ಟು ಬೈಕ್ ಸವಾರರು ಬಿದ್ದು, ಗಾಯ ಮಾಡಿಕೊಂಡಿದ್ದಾರೆ. ರಸ್ತೆ ಚೆನ್ನಾಗಿದೆ ಎಂದು ಸೇತುವೆಯಿಂದ ವೇಗವಾಗಿ ಚಲಾಯಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಈ ಸೇತುವೆಯ ಸುತ್ತಮುತ್ತಲಿನ ರಸ್ತೆಗಳನ್ನು ತಕ್ಷಣ ದುರಸ್ಥಿ ಮಾಡಿಸುವಂತೆ ಪ್ರಯಾಣಿಕರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.