ಮುದ್ದೇಬಿಹಾಳ(ವಿಜಯಪುರ ): ಕಳೆದ ಇಪ್ಪತೈದು ವರ್ಷಗಳ ಹಿಂದೆ ಅಭಿವೃದ್ಧಿ ಕಾಣದೇ ಅಘೋಷಿತ ಕೊಳಚೆ ಪ್ರದೇಶದಂತಿದ್ದ ಹಳ್ಳಿಯ ಸಂಪೂರ್ಣ ಚಿತ್ರಣವೇ ಈಗ ಬದಲಾಗಿದೆ.
ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ಅವರ ಸ್ವಗ್ರಾಮ ನಡಹಳ್ಳಿ ಗ್ರಾಮ ಇದೀಗ ತಾಲೂಕಿನಲ್ಲಿ ಅಲ್ಲದೇ ಇಡೀ ಜಿಲ್ಲೆಯಲ್ಲಿಯೇ ಸಿ.ಸಿ ರಸ್ತೆ ಪೂರ್ಣಗೊಂಡಿರುವ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮುಂಚೆ ಬಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತಿದ್ದ ನಡಹಳ್ಳಿ ಈಗ ಗ್ರಾಮ ಪಂಚಾಯಿತಿಗಳ ಪುನರ್‌ವಿಂಗಡಣೆಯ ಬಳಿಕ ಮಡಿಕೇಶ್ವರ ಗ್ರಾ.ಪಂ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಅಂದಾಜು 60-70 ಮನೆಗಳಿದ್ದು, ಪ್ರತಿ ಮೂಲೆ ಮೂಲೆಯಲ್ಲೂ ಸಿಸಿ ರಸ್ತೆ ಮಾಡಿಸಲಾಗಿದೆ.
ಇದನ್ನು ಓದಿ: ರಾಸಲೀಲೆ ಪ್ರಕರಣ: ದಿನೇಶ್ ಕಲ್ಲಹಳ್ಳಿ ನಿವಾಸಕ್ಕೆ ಪೊಲೀಸ್ ಭದ್ರತೆ
ಈ ಕುರಿತು ಮಾತನಾಡುವ ಗ್ರಾಮಸ್ಥರು, ನಮ್ಮೂರು ಮೊದಲು ಕೊಳಚೆ ಪ್ರದೇಶದಂತಿತ್ತು. ಇದೀಗ ನಮ್ಮೂರಿನ ಮಗ ಮುದ್ದೇಬಿಹಾಳದ ಮತಕ್ಷೇತ್ರದ ಶಾಸಕರಾಗಿರುವುದರಿಂದ ಗ್ರಾಮದ ಅಭಿವೃದ್ಧಿ ಚಿತ್ರಣ ಬದಲಾಗಿದೆ. ಕುಡಿಯುವ ನೀರು, ಚರಂಡಿ ವ್ಯವಸ್ಥೆ ಹಾಗೂ ಸ್ವಚ್ಛತೆಯಲ್ಲಿ ವ್ಯವಸ್ಥೆ ಸುಧಾರಿಸಿದೆ ಎಂದು ಅಲ್ಲಿನ ಜನ ಹೇಳಿಕೊಂಡಿದ್ದಾರೆ.
ಗ್ರಾಮಸ್ಥ ಬಸವಂತ್ರಾಯ ಪಾಟೀಲ ಮಾತನಾಡಿ, ನಮ್ಮೂರು ಮೊದಲು ಹೊಲಗೇರಿ ಅನ್ನುವಂತಾಗಿತ್ತು. ಇದೀಗ ಮನೆಯೊಳಗೆ ಮಲಗುವ ಬದಲು ಮನೆಯಂಗಳದಲ್ಲಿ ನಿಶ್ಚಿಂತವಾಗಿ ಗ್ರಾಮಸ್ಥರು ಮಲಗುತ್ತಿದ್ದಾರೆ. ಮನೆ ಮನೆಗೂ ನಲ್ಲಿ ನೀರು ಪೂರೈಕೆಯಾಗುತ್ತಿದೆ. ಗ್ರಾಮದ ಜನರೀಗ ನೆಮ್ಮದಿಯಿಂದ ಇದ್ದೇವೆ. ಗ್ರಾಮದ ಒಳಗಡೆ ಬರುವ ಮುನ್ನ ಹಳ್ಳಕ್ಕೆ ಊರಿನ ಎಲ್ಲ ನೀರು ಸೇರುವಂತೆ ಸಂಪರ್ಕ ಕೊಡುವ ಕಾರ್ಯ ಒಂದಾದರೆ ಊರಿನ ಸಂಪೂರ್ಣ ಅಭಿವೃದ್ಧಿ ಆದಂತೆ ಎಂದು ಹೇಳಿಕೊಂಡರು.