ಮುದ್ದೇಬಿಹಾಳ (ವಿಜಯಪುರ): ದಲಿತ ಯುವಕನನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕರ್ನಾಟಕ ಮಾದಿಗರ ಸಂಘ ಹಾಗೂ ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಹೋರಾಟಗಾರರು, ಗ್ರೇಡ್-2 ತಹಶೀಲ್ದಾರ್ ಡಿ.ಜೆ. ಕಳ್ಳಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ದೇವಸ್ಥಾನದ ಕಟ್ಟೆ ಮೇಲೆ ತಮಗೆ ಸರಿಸಮನಾಗಿ ಕುಳಿತಿದ್ದ ಎಂಬ ಕಾರಣಕ್ಕಾಗಿ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್. ಗ್ರಾಮದ ಯುವಕ ಅನಿಲ ಇಂಗಳಗಿ ಎಂಬುವರನ್ನು ಮೇಲ್ಜಾತಿಯವರು ಹತ್ಯೆ ಮಾಡಿದ್ದಾರೆ. ಇದೊಂದು ಅಮಾನವೀಯ ಘಟನೆಯಾಗಿದ್ದು, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಜೊತೆಗೆ ಅವರ ಕುಟುಂಬದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಮೃತ ಯುವಕನ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಬೇಕು. ಜೊತೆಗೆ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.